ನವದೆಹಲಿ: 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಿಸಿದ್ದು, ಈ ಫಲಿತಾಂಶದಲ್ಲಿ ಹಲವು ಪರಿಶ್ರಮದ ಕಥೆಗಳು ಹೊರಬಿದ್ದಿವೆ. ಅವುಗಳಲ್ಲಿ ರವಿ ರಾಜ್ ಅವರ ಸಾಧನೆ ವಿಶೇಷವಾಗಿ ಗಮನ ಸೆಳೆದಿದೆ.
ಬಿಹಾರದ ನಾವಡಾ ಜಿಲ್ಲೆಯ ರವಿ ರಾಜ್ ಅಖಿಲ ಭಾರತ ಮಟ್ಟದಲ್ಲಿ 20ನೇ ಸ್ಥಾನ ಪಡೆದಿದ್ದಾರೆ. ದೃಷ್ಟಿಹೀನರಾಗಿದ್ದರೂ ಅವರು ಈ ಸಾಧನೆ ಮಾಡಿರುವುದು ಅನೇಕರಿಗೆ ಸ್ಫೂರ್ತಿಯಾಗಿದೆ.
ಇದಕ್ಕೂ ಮೊದಲು ಅವರು 2024ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 182ನೇ ಸ್ಥಾನ ಪಡೆದಿದ್ದರು. ಅಲ್ಲದೆ 2024ರ ನವೆಂಬರ್ನಲ್ಲಿ ಬಿಹಾರ ಸಾರ್ವಜನಿಕ ಸೇವಾ ಆಯೋಗ ನಡೆಸಿದ 69ನೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಂದಾಯ ಅಧಿಕಾರಿ ಹುದ್ದೆಯನ್ನೂ ಪಡೆದಿದ್ದರು. ಆದರೆ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದರಿಂದ ಆ ಹುದ್ದೆಯನ್ನು ಸ್ವೀಕರಿಸದೆ ಮುಂದುವರೆದು ಅಧ್ಯಯನ ನಡೆಸಿದರು. ಮೂರು ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಅವರು ಹಿಂಜರಿಯದೆ ಪರಿಶ್ರಮ ಮುಂದುವರೆಸಿ ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಕಂಡರು. ಐದನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 20ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಬಾಲ್ಯದಲ್ಲಿ ಅನಾರೋಗ್ಯದಿಂದ ದೃಷ್ಟಿ ಕಳೆದುಕೊಂಡುದು ಅವರ ಜೀವನದಲ್ಲಿ ದೊಡ್ಡ ತಿರುವಾಗಿತ್ತು. ಕೃಷಿಕ ಕುಟುಂಬದಲ್ಲಿ ಜನಿಸಿದ ರವಿ ರಾಜ್ ಅವರ ಭವಿಷ್ಯ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿದ್ದರೂ, ಅವರ ತಾಯಿ ವಿಭಾ ಸಿನ್ಹಾ ಮಾತ್ರ ಮಗನ ಕನಸುಗಳಿಗೆ ಬೆಳಕು ನೀಡಲು ದೃಢನಿಶ್ಚಯ ಮಾಡಿಕೊಂಡಿದ್ದರು. ಗೃಹಿಣಿಯಾಗಿರುವ ಅವರು ಮಗನಿಗೆ ಪಾಠಗಳನ್ನು ಓದಿ ಹೇಳುವುದು, ಟಿಪ್ಪಣಿಗಳನ್ನು ಬರೆಯುವುದು ಸೇರಿದಂತೆ ದಿನಗಟ್ಟಲೆ ಸಹಾಯ ಮಾಡುತ್ತಿದ್ದರು. ರವಿ ತಮ್ಮ ಯಶಸ್ಸಿನ ಸುಮಾರು 90 ಶೇಕಡಾ ಶ್ರೇಯಸ್ಸನ್ನು ತಾಯಿಗೆ ಸಲ್ಲಿಸುತ್ತಾರೆ.
ದೃಷ್ಟಿಹೀನರಾಗಿದ್ದರೂ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅವರು ಪ್ರತಿದಿನ 8ರಿಂದ 10 ಗಂಟೆಗಳ ಕಾಲ ಮನೆಯಲ್ಲಿಯೇ ಅಧ್ಯಯನ ಮಾಡುತ್ತಿದ್ದರು. ಅಧ್ಯಯನದ ವೇಳೆ ಅವರು ಯೂಟ್ಯೂಬ್ನಲ್ಲಿ ಖಾನ್ ಸರ್ ಅವರ ಉಪನ್ಯಾಸಗಳನ್ನು ನಿಯಮಿತವಾಗಿ ಕೇಳುತ್ತಿದ್ದರು. ಇದು ಕಠಿಣ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿತ್ತು.
ರವಿ ರಾಜ್ ಅವರ ತಂದೆ ರಂಜನ್ ಕುಮಾರ್ ಸಿನ್ಹಾ ಸರಳ ರೈತರಾಗಿದ್ದು, ತಮ್ಮ ಸೀಮಿತ ಆದಾಯದ ನಡುವೆಯೂ ಮಗನ ಶಿಕ್ಷಣಕ್ಕೆ ಸದಾ ಬೆಂಬಲ ನೀಡಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮಹುಲಿ ಗ್ರಾಮದಲ್ಲಿ ಸಂಭ್ರಮ ಮನೆಮಾಡಿತು. ಮಗನ ಸಾಧನೆಯಿಂದ ತಂದೆಯ ಕಣ್ಣುಗಳಲ್ಲಿ ಸಂತಸದ ಕಣ್ಣೀರು ತುಂಬಿತು.
ಈಗ ರವಿ ರಾಜ್ ಭಾರತೀಯ ಆಡಳಿತ ಸೇವೆಗೆ ಸೇರುವ ಸಾಧ್ಯತೆ ಇದ್ದು, ಅವರ ಸಾಧನೆ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದೆ. ದೃಢನಿಶ್ಚಯ ಮತ್ತು ಕುಟುಂಬದ ಬೆಂಬಲ ಇದ್ದರೆ ಯಾವುದೇ ಸವಾಲನ್ನೂ ಜಯಿಸಬಹುದು ಎಂಬುದನ್ನು ಅವರ ಜೀವನಕಥೆ ತೋರಿಸುತ್ತದೆ.
































