ನವದೆಹಲಿ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಗರಣವೊಂದರಲ್ಲಿ ಇಡೀ ಪಕ್ಷವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವ ಘಟನೆಗೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿದೆ. ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು(ED) ಎಎಪಿ ಪಕ್ಷವನ್ನು ಆರೋಪಿಯನ್ನಾಗಿ ಪರಿಗಣಿಸಿದ್ದು, ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವ ಸಾಧ್ಯತೆ ಇದೆ.
ಭ್ರಷ್ಟಾಚಾರ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಆರೋಪಿ ಎಂದು ಹೆಸರಿಸಲಾದ ದೇಶದ ಮೊದಲ ರಾಜಕೀಯ ಪಕ್ಷ ಎಂಬ ಕುಖ್ಯಾತಿಗೆ ಎಎಪಿ ಪಾತ್ರವಾಗಿದೆ. ಇದಲ್ಲದೇ ಭಾರತ ರಾಷ್ಟ್ರ ಸಮಿತಿ(BRS) ಪಕ್ಷದ ಮುಖ್ಯಸ್ಥೆ ಕವಿತಾ ಹೆಸರು ಕೂಡ ದೊಷಾರೋಪ ಪಟ್ಟಿಯಲ್ಲಿದೆ.
ಅಬಕಾರಿ ನೀತಿ ಹಗರಣ ತನಿಖೆ ಆರಂಭಿಸಿದ ಬಳಿಕ ಜಾರಿನಿರ್ದೇಶನಾಲಯ ಸಲ್ಲಿಸುತ್ತಿರುವ ಏಳನೇ ದೋಷಾರೋಪ ಪಟ್ಟಿ ಇದಾಗಿದೆ.
ಅಬಕಾರಿ ನೀತಿ ಹಗರಣದ ದೋಷಾರೋಪ ಪಟ್ಟಿಯಲ್ಲಿ ಜಾರಿ ನಿರ್ದೇಶನಾಲಯವು ಅರವಿಂದ್ ಕೇಜ್ರಿವಾಲ್ ಅವರನ್ನು ‘ಕಿಂಗ್‌ಪಿನ್’ ಹಾಗೂ ಪ್ರಮುಖ ಸಂಚುಕೋರ ಎಂದು ಹೆಸರಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪ್ರಕರಣದಲ್ಲಿ 18 ಮಂದಿಯನ್ನು ಇಡಿ ಬಂಧಿಸಿದೆ.