ಕಣ್ಣೂರು : ನಿಯತ್ತು ಎಂದ ತಕ್ಷಣ ನೆನಪಾಗುವುದೇ ಅದು ಶ್ವಾನ. ಹೌದು, ನಿಯತ್ತಿನ ಮಾತು ಬಂದರೆ ಅಲ್ಲಿ ನಾಯಿಯ ಉಲ್ಲೇಖ ಬಂದೇ ಬರುತ್ತದೆ. ಅಂತಹ ಶ್ವಾನವೊಂದು ಈಗ ವಿಶ್ವದಾದ್ಯಂತ ಎಲ್ಲರ ಹೃದಯ ಸೆಳೆದಿದೆ.
ಕೇರಳದ ಕಣ್ಣೂರಿನ ನಾಯಿಯೇ ಈಗ ಜಗತ್ತಿನ ಗಮನ ತನ್ನತ್ತ ಸೆಳೆದಿದೆ. ಹೌದು, ತನ್ನ ಮೃತ ಯಜಮಾನನಿಗಾಗಿ 4 ತಿಂಗಳಿನಿಂದ ಶವಾಗಾರದ ಎದುರೇ ಕಾಯುತ್ತಿರುವ ಕರುಣಾಜನಕ ಪ್ರಕರಣ ಕೇರಳದ ಕಣ್ಣೂರು ಜಿಲ್ಲೆಯಿಂದ ವರದಿಯಾಗಿದೆ. ಜಿಲ್ಲಾಸ್ಪತ್ರೆಯ ಮುಂದೆ ಯಜಮಾನನಿಗಾಗಿ ನಾಯಿ ಕಾಯುತ್ತಿರುವ ದೃಶ್ಯ ಮನಕಲಕುತ್ತಿದೆ. ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಗೆ ರೋಗಿಯೊಬ್ಬರು ಬಂದಿದ್ದು, ರೋಗಿಯೊಂದಿಗೆ ನಾಯಿಯೂ ಬಂದಿತ್ತು. ರೋಗಿ ಮೃತಪಟ್ಟಿದ್ದು, ಮಾಲೀಕರನ್ನು ಶವಾಗಾರಕ್ಕೆ ಕರೆದೊಯ್ಯುತ್ತಿರುವುದನ್ನು ನಾಯಿ ನೋಡಿದೆ. ನಾಯಿಯು ಮಾಲೀಕ ಇನ್ನೂ ಇಲ್ಲಿಯೇ ಇದ್ದಾನೆ ಎಂದು ಭಾವಿಸುತ್ತಿದೆ. ಈ ಸ್ಥಳವನ್ನು ಬಿಟ್ಟು ಹೋಗುತ್ತಿಲ್ಲ ಮತ್ತು ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿಯೇ ಇದೆ ಎಂದು ಕಣ್ಣೂರಿನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ವಿಕಾಸ್ ಕುಮಾರ್ ಹೇಳಿದ್ದಾರೆ. ನಿಯತ್ತಿನ ನಾಯಿ ಈಗ ಇಲ್ಲಿಯೇ ವಾಸಿಸುತ್ತಿದೆ. ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದು ಕುಮಾರ್ ಹೇಳಿದ್ದಾರೆ.