ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಬಿಡುಗಡೆ ಮಾಡಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇ ಗೌಡ ಅವರನ್ನು ಬಂಧಿಸಲಾಗಿದೆ. ದೇವರಾಜೇಗೌಡ ಬಂಧನ ಸರಿಯಲ್ಲ ಎಂದು ಅವರ ಬಂಧನವನ್ನು ಪ್ರತಿಪಕ್ಷ ನಾಯಕ ಆರ್ ಅಶೋಕ್ ಖಂಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಪೆನ್‌ಡ್ರೈವ್ ಬಿಡುಗಡೆ ಮಾಡಿದ ಬಗ್ಗೆ ಸಾಕ್ಷಿಯನ್ನು ಸಿಬಿಐಗೆ ನೀಡುವುದಾಗಿ ದೇವರಾಜೇಗೌಡ ಹೇಳಿದ್ರು. ಆದರೆ ಅವರನ್ನ ಬಂಧಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಹೆಸರು ಹೇಳದಂತೆ ಧಮ್ಕಿ ಹಾಕಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರ ಎಸ್ ಐಟಿ ಅನ್ನು ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರದ ನಡೆ ಹೀಗೆ ಮುಂದುವರಿದರೆ ನಾವು ಸುಮ್ಮನೆ ಇರಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ದೇವರಾಜೇ ಗೌಡ ಅವರನ್ನು ಸತತ ನಾಲ್ಕೂವರೆ ಗಂಟೆಗಳ ಕಾಲ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೇಳಿಕೆ ಪಡೆಯುವುದು ಬಾಕಿ ಇದೆ. ಹೇಳಿಕೆ ಪಡೆದ ಬಳಿಕ ದೇವರಾಜೇಗೌಡರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.
ಜೊತೆಗೆ ದೇವರಾಜೇಗೌಡರ ಕಾರು ಚಾಲಕನನ್ನು ಪೊಲೀಸರು ಕರೆದೊಯ್ದು ಕಾರು ತಪಾಸಣೆ ನಡೆಸಿದ್ದಾರೆ. ಪೊಲೀಸರು ಕಾರಿನಲ್ಲಿದ್ದ ಬ್ಯಾಗ್‌ಗಳನ್ನು ಪರಿಶೀಲಿಸಿದ್ದಾರೆ. ಇದೇ ವೇಳೆ ಕಾರಿನಲ್ಲಿದ್ದ ಮೊಬೈಲ್ ಜೊತೆಗೆ ದೇವರಾಜೇಗೌಡರ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವಕೀಲ ದೇವರಾಜೇಗೌಡರನ್ನು ನಿನ್ನೆ ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದರು.