ದೇವಸ್ಥಾನಗಳ ಅಡುಗೆ ಕೋಣೆ, ಉಗ್ರಾಣಗಳಲ್ಲಿ ಸಿಸಿಟಿವಿ ಕಡ್ಡಾಯ

ಬೆಂಗಳೂರು : ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಮೀನಿನ ಎಣ್ಣೆ ಮತ್ತು ದನದ ಕೊಬ್ಬು ಬಳಸಿರುವುದು ಬೆಳಕಿಗೆ ಬಂದು ಭಾರಿ ವಿವಾದ ಸೃಷ್ಟಿಯಾದ ಬಳಿಕ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಹಲವು ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸರಕಾರ ಸೂಚನೆ ನೀಡಿದೆ. ಈಗ ರಾಜ್ಯದ ಎಲ್ಲ ವರ್ಗದ ದೇವಸ್ಥಾನಗಳ ಅಡುಗೆ ಕೋಣೆ, ಉಗ್ರಾಣ ಮತ್ತು ಪ್ರಸಾದ ವಿತರಣೆ ಜಾಗದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಆದೇಶ ಹೊರಡಿಸಲಾಗಿದೆ.ಇತ್ತೀಚೆಗೆ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಒಂದಷ್ಟು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. ಇದೀಗ ಮುಜರಾಯಿ ಇಲಾಖೆ ರಾಜ್ಯದ ಎಲ್ಲ ದೇವಸ್ಥಾನಗಳ ಉಗ್ರಾಣ ಮತ್ತು ಪ್ರಸಾದ ವಿತರಣೆ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ ಮಾಡಬೇಕು ಎಂಬ ಸೂಚನೆ ನೀಡಿ ಆದೇಶ ಹೊರಡಿಸಿದೆ. ಈ ಹಿಂದೆ ರಾಜ್ಯದಲ್ಲಿ ವಿವಿಧ ಬ್ರಾಂಡ್ ತುಪ್ಪಗಳ ಮತ್ತು ಪ್ರಸಾದಗಳನ್ನು ಪರೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೆ ಮುಜರಾಯಿ ಇಲಾಖೆ ದೇವಸ್ಥಾನದ ಉಗ್ರಾಣ ಮತ್ತು ಪ್ರಸಾದ ವಿತರಣೆಯ ಸ್ಥಳದಲ್ಲಿ ಸಿಸಿಟಿವಿ ಕಡ್ಡಾಯ ಮಾಡಿ ಆದೇಶಿಸಿದೆ. ಈ ಮೂಲಕ ಭಕ್ತರಲ್ಲಿ ಯಾವುದೇ ಅನುಮಾನ ಹುಟ್ಟದಂತೆ ಕ್ರಮ ವಹಿಸುತ್ತಿದೆ.ತಿರುಪತಿ ದೇವಸ್ಥಾನ ಶ್ರೀಮಂತ ದೇವಾಲಯ. ಲಕ್ಷಾಂತರ ಜನರು ಭೇಟಿ ನೀಡುವ ಪ್ರಮುಖ ಸ್ಥಳವಾಗಿದ್ದು, ಇಂತಹ ಪ್ರಮುಖ ಸ್ಥಳದಲ್ಲಿಯೇ ಹೀಗಾಗಿದೆ. ಇನ್ನೂ ಸಾಮಾನ್ಯ ದೇವಸ್ಥಾನಗಳ ಕಥೆ ಏನು ಎಂಬ ಮನಸ್ಥಿತಿಯಲ್ಲಿ ಸಾರ್ವಜನಿಕರಿದ್ದಾರೆ. ಈ ಕಾರಣದಿಂದಲೇ ಭಕ್ತರ ಅನುಮಾನ ತೊಲಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.ಮುಜರಾಯಿ ಇಲಾಖೆಯ ಈ ಹಿಂದಿನ ನಿಯಮದ ಪ್ರಕಾರ, ರಾಜ್ಯದ ‘ಎ’ ವರ್ಗದ ದೇವಸ್ಥಾನಗಳಲ್ಲಿ ಮಾತ್ರವೇ ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು. ಇದೀಗ ‘ಬಿ’ ಹಾಗೂ ‘ಸಿ’ ವರ್ಗದ ದೇವಾಲಯಗಳ ಪ್ರಸಾದ, ಅಡುಗೆ ತಯಾರಿಕಾ ಕೊಠಡಿಯಲ್ಲಿ ಸಿಸಿಟಿವಿ ಅಳಡಿಕೆಗೆ ಸೂಚಿಸಲಾಗಿದೆ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಆಡಳಿತ ಮಂಡಳಿ, ಮುಖ್ಯಸ್ಥರ ವಿರುದ್ಧ ಕ್ರಮ ಜರುಗಿಸುವ ಬಗ್ಗೆಯು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement