ಧಾರವಾಡ: ಆಯಾ ದೇವಸ್ಥಾನಕ್ಕೆ ಬರುವ ಹುಂಡಿ ಹಣ ಅದೇ ದೇವಸ್ಥಾನಕ್ಕೆ ಸೇರುತ್ತದೆ. ದೇವಸ್ಥಾನಕ್ಕೆ ಸಾಕಷ್ಟು ಹಣ ಬರುತ್ತದೆ ಹಾಗೂ ಆ ಹಣ ದೇವಸ್ಥಾನ ಅಭಿವೃದ್ದಿಗೆ ಮಾತ್ರ ಸೀಮಿತವಾಗಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆಗೆ ಬರುವಂತಹ ಆದಾಯವು ಸರ್ಕಾರಕ್ಕೆ ಬರುವ ಪ್ರಶ್ನೆಯಿಲ್ಲ. ರಾಜ್ಯದಲ್ಲಿ 34,000 ದೇವಸ್ಥಾನಗಳಿವೆ. ಒಂದು ದೇವಸ್ಥಾನದಿಂದ ಮತ್ತೊಂದು ದೇವಸ್ಥಾನಕ್ಕೆ ಹಣ ವರ್ಗಾವಣೆಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಶಕ್ತಿ ಯೋಜನೆಯಿಂದ ಬಸ್ಸುಗಳಲ್ಲಿ ಜನರ ದಟ್ಟಣೆ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಹೊಸ ಬಸ್ ಖರೀದಿಸಿರಲಿಲ್ಲ. ಸಿಬ್ಬಂದಿ ನೇಮಕವೂ ಆಗಿರಲಿಲ್ಲ. ಪ್ರತಿನಿತ್ಯ ಸರ್ಕಾರಿ ಬಸ್ ಗಳಲ್ಲಿ ಸುಮಾರು 80 ಲಕ್ಷ ಜನ ಓಡಾಡುತ್ತಾರೆ. ಈ ವೇಳೆ ಶಕ್ತಿ ಯೋಜನೆ ಪ್ರಾರಂಭವಾಗಿ ನಿತ್ಯ ಓಡಾಡುವವರ ಸಂಖ್ಯೆ 1 ಕೋಟಿ ದಾಟಿದೆ. ಇದರಿಂದ ಸ್ವಲ್ಪ ಶಾಲಾ ಮಕ್ಕಳಿಗೆ ಕಷ್ಟವಾಗಿದೆ. ಈಗ ಹೊಸ ಬಸ್ ಗಳು ಬರಲಿದ್ದು, ಸಮಸ್ಯೆಗಳು ಶೀಷ್ರವೇ ಪರಿಹಾರವಾಗುತ್ತದೆ ಎಂದರು.
ಇನ್ನು ಶಕ್ತಿ ಯೋಜನೆ ಬಗ್ಗೆ ಬಿಜೆಪಿ ಮಾಡಿರುವ ಆರೋಪದ ಕುರಿತು ಮಾತನಾಡಿದ ಅವರು, ಬಿಜೆಪಿಯವರು ತಾವು ಕೆಲಸ ಮಾಡುವುದಿಲ್ಲ ಜೊತೆಗೆ ಕೆಲಸ ಮಾಡುವವರಿಗೂ ಸಹ ಬಿಡುವುದಿಲ್ಲ. ಬಿಜೆಪಿಯವರು ನಾಲ್ಕು ವರ್ಷದಿಂದ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಬಸ್ ನಿಲ್ದಾಣಗಳನ್ನು ಯಾಕೆ ಕಟ್ಟಲಿಲ್ಲ ಎಂದು ಪ್ರಶ್ನಿಸಿದ್ದಾರೆ.