ದೇವಸ್ಥಾನದ ಒಳಗಡೆ ಇರುವ ದೇವರ ಮೂರ್ತಿಗಳಿಗೆ ಯಾವುದೇ ಶಕ್ತಿ ಇರುವುದಿಲ್ಲ ಎಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನ ಅಂಗೀಕರಿಸಿದ ಒಂದು ದಿನದ ನಂತರ ಮಾತನಾಡಿದ ರಾಹುಲ್ ಗಾಂಧಿ, ಈ ಮಸೂದೆಯು “ಜಾತಿ ಜನಗಣತಿಯ ಬೇಡಿಕೆಯಿಂದ ಗಮನವನ್ನ ಬೇರೆಡೆಗೆ ಸೆಳೆಯುವ ಮತ್ತು ಬೇರೆಡೆಗೆ ತಿರುಗಿಸುವ ತಂತ್ರವಾಗಿದೆ” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಲೋಕಸಭೆಯಲ್ಲಿ ಬಿಜೆಪಿಗೆ ಒಬಿಸಿ ಪ್ರಾತಿನಿಧ್ಯವಿದೆ ಎಂಬ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ಯಾವುದೇ ಬಿಜೆಪಿ ಸಂಸದರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಥವಾ ಕಾನೂನು ರೂಪಿಸುವಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ಸಂಸದರನ್ನು ದೇವಾಲಯಗಳಲ್ಲಿನ ವಿಗ್ರಹಗಳಿಗೆ ಹೋಲಿಸುವ ಮೂಲಕ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ಕಾಂಗ್ರೆಸ್ ಸಂಸದರಾಗಲಿ, ಬಿಜೆಪಿ ಸಂಸದರಾಗಲಿ ಅಥವಾ ಬೇರೆ ಯಾವುದೇ ಸಂಸದರಾಗಲಿ ಅವರನ್ನು ದೇವಾಲಯಗಳಲ್ಲಿ ಮೂರ್ತಿಗಳನ್ನಾಗಿ ಮಾಡಲಾಗಿದೆ. ಒಬಿಸಿ ಸಂಸದರನ್ನ ಸಂಸತ್ತಿನಲ್ಲಿ ಮೂರ್ತಿಗಳಂತೆ ತುಂಬಲಾಗಿದೆ ಆದರೆ ಅವರಿಗೆ ಯಾವುದೇ ಅಧಿಕಾರವಿಲ್ಲ. ದೇಶವನ್ನು ನಡೆಸುವಲ್ಲಿ ಯಾವುದೇ ಕೊಡುಗೆ ಇಲ್ಲ. ಈ ಪ್ರಶ್ನೆಯನ್ನು ನಾನು ಎತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಸಂಸದರನ್ನ ‘ಅಧಿಕಾರವಿಲ್ಲದ’ ದೇವಾಲಯದ ವಿಗ್ರಹಗಳೊಂದಿಗೆ ರಾಹುಲ್ ಗಾಂಧಿ ಹೋಲಿಕೆ ಮಾಡಿದ್ದು, ಇದು ಆಕ್ರೋಶಕ್ಕೆ ಕಾರಣವಾಗಿದೆ.