ಬೆಂಗಳೂರು: ದೇಶದಲ್ಲಿ ಅನೇಕ ನಕಲಿ ಭಕ್ತರು ಇದ್ದಾರೆ. ಅದರ ನಡುವೆ ನಮ್ಮ ಹಿರಿಯರು ನಮ್ಮತನವನ್ನು ಉಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಮೊದಲು ಕಿಚ್ಚು ಹಚ್ಚಿದ್ದೆ ಕರ್ನಾಟಕ. ನೂರು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿ ಮಹಾತ್ಮ ಗಾಂಧಿ ಕರ್ನಾಟಕದಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ಈ ದಿನವನ್ನು ನೆನಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಸ್ವಾತಂತ್ರ್ಯ ಎಂದರೆ ಇತಿಹಾಸ ನೆನಪಿಸುವ ದಿನ. ಸ್ವಾತಂತ್ರ್ಯ ಪೂರ್ವದಲ್ಲಿ ಹೇಗೆ ಇದ್ದೆವು, ಈಗ ಹೇಗೆ ಇದ್ದೇವೆ ಎಂದು ಅವಲೋಕನ ಮಾಡುವ ದಿನ. ಸ್ವಾತಂತ್ರ್ಯ ಎಂದರೆ ಬೆಲೆಕಟ್ಟಿ ಪಡೆಯುವ ವಸ್ತುವಲ್ಲ. ಅದು ನಮ್ಮ ಉಸಿರು. ಇದನ್ನು ಮಹಾತ್ಮ ಗಾಂಧಿ ಹೇಳಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಇದು. ಈ ಪಕ್ಷದಲ್ಲಿ ಇದ್ದೇವೆ ಅನ್ನುವುದೇ ಹೆಮ್ಮೆಯ ವಿಚಾರ. ನೆಹರೂ ವಲ್ಲಭಭಾಯಿ ಪಟೇಲ್ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎಂಬ ಸುಳ್ಳು ಸುದ್ದಿ ಗಮನಿಸಿದ್ದೇವೆ. 6.5 ಲಕ್ಷ ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.