ನವದೆಹಲಿ: ಶ್ರಾವಣ ಮಾಸದ ಆರಂಭದಲ್ಲಿ ಸಂಸತ್ತಿನ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿದ್ದು, ಸಕಾರಾತ್ಮಾಕ , ಸೃಜನಾತ್ಮಕ ಕಲಾಪದೊಂದಿಗೆ ದೇಶದ ಜನತೆಯ ಕನಸು ಸಾಕಾರಗೊಳಿಸಲು ಇದೊಂದು ಮಹತ್ವದ ಘಳಿಗೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಧಿವೇಶನ ಆರಂಭಕ್ಕೂ ಮುನ್ನ, ಸಂಸತ್ ಭವನದ ಆವರಣದಲ್ಲಿ ಅವರು, ಭಾರತದ ಪ್ರಜಾಪ್ರಭುತ್ವದ ಗೌರವದ ಸಂದರ್ಭ ಇದಾಗಿದೆ. ಸತತ ಮೂರನೇ ಬಾರಿಗೆ ಸರ್ಕಾರ ಅಧಿಕಾರಕ್ಕೆ ಬಂದು ಜನತೆಯ ಅಶೋತ್ತರಗಳನ್ನು ಈಡೇರಿಸಲು ಬದ್ಧವಾಗಿದೆ. ಜನರಿಗೆ ಖಾತರಿಗಳನ್ನು ನೀಡುತ್ತಾ, ಅವುಗಳನ್ನು ಈಡೇರಿಸುವತ್ತ ಮುಂದೆ ಸಾಗಿದ್ದೇವೆ. ಬಜೆಟ್ ಅಧಿವೇಶನ ತಮ್ಮ ಸರ್ಕಾರದ 5 ವರ್ಷಗಳ ಅಭಿವೃದ್ಧಿಯ ದೃಷ್ಟಿಕೋನವಾಗಿದೆ. ಈ ಮೂಲಕ 2047ರ ವಿಕಸಿತ ಭಾರತದ ಗುರಿ ಸಾಕಾರಗೊಳಿಸಲು ಬದ್ಧರಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು.
ವಿಶ್ವದಲ್ಲಿ ಭಾರತ, ಅತಿ ವೇಗದ ಆರ್ಥಿಕತೆ ಬೆಳವಣಿಗೆ ಸಾಧಿಸಿದ್ದು, ಪ್ರತಿ ವರ್ಷ ಶೇಕಡ 8ರಷ್ಟು ಪ್ರಗತಿ ಹೊಂದುತ್ತಾ ಮುನ್ನಡೆದಿದ್ದೇವೆ ಎಂದು ಹೇಳಿದ ಪ್ರಧಾನಿ, ದೇಶದ ಬಡವರು, ರೈತರು, ಯುವಕರು, ಮಹಿಳೆಯರ ಅಭ್ಯುದಯಕ್ಕಾಗಿ ಎಲ್ಲ ಒಗ್ಗಟ್ಟಾಗಿ ಶ್ರಮಿಸೋಣ ಎಂದು ತಿಳಿಸಿದರು. ಚುನಾವಣೆಗೆ ಪೂರ್ವ ಜನತೆಗೆ ಏನೆಲ್ಲಾ ಭರವಸೆ ನೀಡಿದ್ದೀರೊ ಅವುಗಳ ಈಡೇರಿಕೆಗೆ ಬದ್ಧರಾಗಿ ಎಲ್ಲ ಸದಸ್ಯರು ಕೆಲಸ ಮಾಡಬೇಕಿದೆ. ಚುನಾವಣಾ ಪೂರ್ವದ ಆ ಸಂಘರ್ಷ ಬಿಟ್ಟು ಇದೀಗ ದೇಶದ ಅಭಿವೃದ್ಧಿಗೋಸ್ಕರ ಒಗ್ಗಟ್ಟಾಗಿ ಸಂಘರ್ಷ ಮಾಡೋಣ ಎಂದು ಪ್ರಧಾನಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದರು. ಕೆಲ ರಾಜಕೀಯ ಪಕ್ಷಗಳು ನಕಾರಾತ್ಮಕ ಧೋರಣೆ ಹೊಂದಿವೆ. ಈ ರೀತಿಯ ಮನೋಸ್ಥಿತಿಯನ್ನು ಬಿಟ್ಟು ಹೊಸದಾಗಿ ಆಯ್ಕೆಯಾಗಿ ಬಂದಿರುವ ಸಂಸದರಿಗೆ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ನರೇಂದ್ರ ಮೋದಿ ಹೇಳಿದರು