ಬೆಂಗಳೂರು: ಕಳೆದ 75 ವರ್ಷಗಳಲ್ಲಿ ಭಾರತವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಒಂಬತ್ತು ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಭಾರತ್ ಜೋಡೊ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಮುಂಬರುವ ಲೋಕಸಭಾ ಚುನಾವಣಾ ಪೂರ್ವ ತಯಾರಿ ಸಭೆಯಲ್ಲಿ ಅವರು ಮಾತನಾಡಿ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉದಾತ್ತ ಇತಿಹಾಸ ಕಾಂಗ್ರೆಸ್ ಗೆ ಇದೆ. ಇದಾದ ಮೇಲೆ ದೇಶದ ಚುಕ್ಕಾಣಿ ಹಿಡಿದ ಜವಾಹರ್ ಲಾಲ್ ನೆಹರು ಸೇರಿದಂತೆ ಅನೇಕರು ಅರ್ಥಪೂರ್ಣ ಕೆಲಸಗಳನ್ನು ಮಾಡುವ ಮೂಲಕ ಭಾರತವನ್ನು ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಸಿದರು. ಇದನ್ನು ಮೋದಿ ಸೇರಿದಂತೆ ಬಿಜೆಪಿ ನಾಯಕರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ದೇಶದಲ್ಲಿರುವ ಅಣೆಕಟ್ಟುಗಳಲ್ಲಿ ಶೇಕಡ 95 ರಷ್ಟು ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ಹಾಗೆಯೇ ಐಐಎಂ, ಐಐಟಿ, ಏಮ್ಸ್, ಕ್ಷೀರಕ್ರಾಂತಿ, ಕೃಷಿ ಕ್ರಾಂತಿ, ಡಿಜಿಟಲ್ ಕ್ರಾಂತಿ ಇವೆಲ್ಲವನ್ನು ಮಾಡಿದ್ದು ನಮ್ಮ ಪಕ್ಷವೇ ಹೊರತು ಕೋಮುವಾದಿ ರಾಜಕಾರಣ ಮಾಡುತ್ತಿರುವ ಮೋದಿಯಲ್ಲ. ಅವರೇನಿದ್ದರೂ ಚೆನ್ನಾಗಿ ಭಾಷಣ ಮಾಡಬಲ್ಲರು ಅಷ್ಟೇ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಬಡವರ ಸಬಲೀಕರಣ ಆಗಬೇಕೆಂಬ ಕನಸಿನೊಂದಿಗೆ ಆಹಾರ ಭದ್ರತೆ ಮತ್ತು ಕಡ್ಡಾಯ ಶಿಕ್ಷಣದ ಕಾಯ್ದೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ಸಿನದೇ ಆಗಿದೆ ಎಂದರು.