ಪ್ರತೀ ದೇಹಕ್ಕೆ ಒಂದಷ್ಟು ಸ್ವಚ್ಛಗೊಳಿಸುವ ಕ್ರಿಯೆ ಅಗತ್ಯವಾಗಿರುತ್ತದೆ. ತಿಂದ ಆಹಾರ, ದೇಹದಲ್ಲಿ ಉತ್ಪತ್ತಿಯಾಗುವ ನಿರುಪಯುಕ್ತ ವಸ್ತುಗಳು ಎಲ್ಲವನ್ನೂ ಹೊರಹಾಕುವುದು ಅಗತ್ಯವಾಗಿರುತ್ತದೆ. ಇದಕ್ಕಾಗಿ ಕೆಲವು ಆಹಾರಗಳು ಸಹಾಯ ಮಾಡುತ್ತದೆ.
ಅವುಗಳಲ್ಲಿ ಕೆಲವು ಜ್ಯೂಸ್ಗಳು ಉತ್ತಮ ಡಿಟಾಫ್ಸಿಫಿಕೇಶನ್ ಗಳಾಗಿ ಕೆಲಸ ಮಾಡುತ್ತವೆ. ಎಬಿಸಿ ಜ್ಯೂಸ್ಗಳು ಇದಕ್ಕೆ ಹೆಚ್ಚು ನೆರವಾಗುತ್ತದೆ, ಅರೇ ಏನಿದು ‘ABC’ ಜ್ಯೂಸ್ ಅಂತೀರಾ ಇಲ್ಲಿದೆ ನೋಡಿ ಮಾಹಿತಿ. ಎ-ಎಂದರೆ ಆಪಲ್ ಜ್ಯೂಸ್, ಬಿ ಎಂದರೆ ಬಿಟ್ರೂಟ್ ಜ್ಯೂಸ್ ಇನ್ನು ಸಿ ಎಂದರೆ ಕ್ಯಾರೇಟ್ ಜ್ಯೂಸ್. ಇವೇ ನೋಡಿ ಎಬಿಸಿ ಜ್ಯೂಸ್ಗಳು. ಈ ಪದಾರ್ಥಗಳ ತಾಜಾ ಜ್ಯೂಸ್ ತಯಾರಿಸಿ ಸೇವಿಸಿದರೆ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಬಹುದು. ಅದರ ಜತೆಗೆ ಈ ಎಬಿಸಿ ಜ್ಯೂಸ್ನಿಂದ ಆರೋಗ್ಯಕ್ಕೆ ಯಾವೆಲ್ಲಾ ಉಪಯೋಗಗಳಿವೆ ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು. ಆಪಲ್ ಜ್ಯೂಸ್:ಸೇಬುವಿನಲ್ಲಿ ಯಥೇಚ್ಛವಾದ ವಿಟಮಿನ್ ಸಿ, ಫೈಬರ್ ಸೇರಿದಂತೆ ಆ್ಯಂಟಿಆಕ್ಸಿಡೆಂಟ್ ಅಂಶಗಳು ಅಡಕವಾಗಿದೆ.
ಇವು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತವೆ. ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ನಿಮ್ಮ ಡಯೆಟ್ಗೂ ಈ ಆಪಲ್ ಜ್ಯೂಸ್ ಸಹಕಾರಿಯಾಗಿದೆ. ಆದ್ದರಿಂದ ನಿಮ್ಮ ದಿನನಿತ್ಯದ ಜೀವನದಲ್ಲಿ ಆಪಲ್ ಜ್ಯೂಸ್ ಸೇವನೆ ಅಭ್ಯಾಸ ಮಾಡಿಕೊಳ್ಳಿ. ಬಿಟ್ರೂಟ್ ಜ್ಯೂಸ್:ಹೆಚ್ಚು ಪೋಷಕಾಂಶಗಳಿರುವ ಗಡ್ಡೆಯ ಆಹಾರ ಬಿಟ್ರೂಟ್. ದೇಹದಲ್ಲಿ ರಕ್ತದ ಉತ್ಪತ್ತಿಯನ್ನು ಹೆಚ್ಚಿಸಿ, ಆರೋಗ್ಯವನ್ನು ಕಾಪಾಡುವಲ್ಲಿ ಬಿಟ್ರೂಟ್ ಸಹಕಾರಿಯಾಗಿದೆ, ಅಲ್ಲದೆ ಬಿಟ್ರೂಟ್ ಜ್ಯೂಸ್ ಸೇವನೆಯಿಂದ ಜೀರ್ಣವ್ಯವಸ್ಥೆಯೂ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ಕ್ಯಾನ್ಸರ್ನ ಅಪಾಯವನ್ನೂ ಕಡಿಮೆ ಮಾಡುತ್ತದೆ. ಕ್ಯಾರೇಟ್ ಜ್ಯೂಸ್:ವಿಟಮಿನ್ ಎ, ಫೈಬರ್, ವಿಟಮಿನ್ ಕೆ ಅಂಶಗಳನ್ನು ಹೇರಳವಾಗಿ ಹೊಂದಿರುವ ಕ್ಯಾರೆಟ್ ದೇಹವನ್ನು ಆಂತರಿಕವಾಗಿ ಸ್ವಚ್ಛಗೊಳಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿಡ್ನಿಯ ಆರೋಗ್ಯ ಮತ್ತು ಕಣ್ಣಿನ ಆರೋಗ್ಯಕ್ಕೂ ಕ್ಯಾರೇಟ್ ಒಳ್ಳೆಯದು.