ಬೆಳ್ತಂಗಡಿ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದೇವರ ದರ್ಶನ ಪಡೆದರು. ದೇವಾಲಯದ ಹೊರ ಆವರಣದಲ್ಲಿಯೇ ವಾಹನದಿಂದ ಇಳಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಯವರನ್ನು ದೇವಾಲಯದೊಳಗೆ ರೆಡ್ ಕಾರ್ಪೆಟ್ ಹಾಕಿ, ವಾದ್ಯಘೋಷ, ಆನೆ, ಪದಾತಿ ಸಮ್ಮೇಳನದೊಂದಿಗೆ ವೈಭವದಿಂದ ಸ್ವಾಗತಿಸಲಾಯಿತು. ಆ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತನಾಡಿದರು. ಈ ವೇಳೆ ಮಾಧ್ಯಮದೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಉತ್ತಮ ಮಳೆ – ಬೆಳೆ ಆಗಲೆಂದು ಪ್ರಾರ್ಥನೆ ಮಾಡಿದ್ದೇವೆ. ನಮ್ಮ ಧರ್ಮದ ಸಂಪ್ರದಾಯದಂತೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದರ್ಶನ ಮಾಡಲು ಬಂದಿದ್ದೇವೆ. ರಾಜ್ಯದ ಜನತೆ ಪರವಾಗಿ ಹಾಗೂ ವೈಯಕ್ತಿಕ ಪ್ರಾರ್ಥನೆ ಮಾಡಿದ್ದೇವೆ ಎಂದರು. ರಾಜ್ಯದ ನಾನಾ ಕಡೆಗಳಿಂದ ಶಕ್ತಿ ಯೋಜನೆ ಪ್ರಯೋಜನ ಪಡೆದು ಧರ್ಮಸ್ಥಳಕ್ಕೆ ಭಕ್ತರು ಬರುತ್ತಿದ್ದಾರೆಂದು ವೀರೇಂದ್ರ ಹೆಗ್ಗಡೆಯವರು ಹೇಳಿದರು. ಶಕ್ತಿ ಯೋಜನೆಯಿಂದ ದಿನವೂ ಸಾವಿರಾರು ಮಂದಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ ಎಂದರು. ಇದೇ ವೇಳೆ ದೇವಸ್ಥಾನದೊಳಗೆ ಇದ್ದ ಮಹಿಳಾ ಭಕ್ತರು ತಮಗೆ ಎರಡು ಸಾವಿರ ಸಿಗುತ್ತದೆಂದು ಹೇಳಿದರು. ಅವರೆಲ್ಲರ ಆಶೀರ್ವಾದ ನಮಗೆ ಶಕ್ತಿ ತುಂಬಿದೆ. ಮನೆಯಲ್ಲಿ ಜ್ಯೋತಿ ಬೆಳಗಿದೆ. ಗೃಹಲಕ್ಷ್ಮಿ ಸಿಗುತ್ತಿದೆ. ಅನ್ನ ಭಾಗ್ಯ ಸಿಗುತ್ತಿದೆ ಎಲ್ಲ ಸೌಕರ್ಯ ಸಿಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.