ಧರ್ಮಸ್ಥಳ: ಎಂಟು ಶತಮಾನಗಳಿಂದ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿ ದಾನದೊಂದಿಗೆ ಸರ್ವಧರ್ಮೀಯರ ಶ್ರದ್ಧಾ-ಭಕ್ತಿಯ ಹಾಗೂ ಸಾಮಾಜಿಕಸಾಮರಸ್ಯದ ಶ್ರದ್ಧಾಕೇಂದ್ರವಾಗಿ ಬೆಳೆಯುತ್ತಿರುವ, ಬೆಳಗುತ್ತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳವು ಭಕ್ತರಿಗೆ ಕಲಿಯುಗದ ಕಲ್ಪವೃಕ್ಷವಾಗಿದೆ. ಇಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿ, ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ, ಬಾಹುಬಲಿ ಬೆಟ್ಟ, ಅಣ್ಣಪ್ಪಬೆಟ್ಟ, ಪ್ರಶಾಂತ ಪ್ರಾಕೃತಿಕ ಪರಿಸರ, ಪವಿತ್ರ ಪುಣ್ಯನದಿ ನೇತ್ರಾವತಿ – ಎಲ್ಲವುಗಳ ದರ್ಶನ ಮಾಡಿದಾಗ ನಮ್ಮ ಮಾನಸಿಕ ದುಃಖ, ದುಮ್ಮಾನಗಳೆಲ್ಲ ದೂರವಾಗಿ ಶಾಂತಿ, ನೆಮ್ಮದಿ ಸಿಗುತ್ತದೆ. ಧರ್ಮಸ್ಥಳವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಕಾರದ ಪ್ರೇರಣೆ ಮತ್ತು ಸ್ಪೂರ್ತಿಯ ಕೇಂದ್ರವಾಗಿದೆ ಎಂದು ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೆಳಿದರು.