ಧರ್ಮ-ಜಾತಿ ಹೆಸರಲ್ಲಿ ಸಮಾಜ ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ : ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು : ಧರ್ಮ-ಜಾತಿ ಹೆಸರಲ್ಲಿ ಸಮಾಜವನ್ನು ಒಡೆಯುತ್ತಾ ಹೋದಂತೆ ಅಸಮಾನತೆ ಹೆಚ್ಚುತ್ತದೆ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು. ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷದ ಸಂಸ್ಮರಣೆಗಾಗಿ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ “21ನೇ ಶತಮಾನಕ್ಕೆ ಮಹಾತ್ಮಗಾಂಧೀಜಿ” ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ ವ್ಯವಸ್ಥೆ ಕಾರಣದಿಂದ ಬಹು ಜನರು ಶಿಕ್ಷಣದಿಂದ ವಂಚಿತರಾದರು. ಈ ಕಾರಣಕ್ಕೆ ಅಸಮಾನತೆ ಹೆಚ್ಚಾಯ್ತು. ವಿದ್ಯಾವಂತರೇ ಹೆಚ್ಚೆಚ್ಚು ಜಾತಿವಾದಿಗಳಾಗುತ್ತಿರುವುದು ದುರಂತ. ಜಾತಿ ಅಸಮಾನತೆಯ ಪೋಷಕರೇ ಮಹಾತ್ಮಗಾಂಧಿಯವರನ್ನು ಕೊಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧೀಜಿ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು 20ನೇ ಶತಮನಕ್ಕೆ ಮಾತ್ರ ಸೀಮಿತವಾಗಿಲ್ಲ. ಈಗಿನ ಕಾಲಕ್ಕೂ ಪ್ರಸ್ತುತವಾಗಿವೆ.‌ ಗಾಂಧೀಜಿಯವರು ಶಾಂತಿ, ಸತ್ಯ, ನ್ಯಾಯ ಮತ್ತು ಬ್ರಾತೃತ್ವವನ್ನು ಬದುಕಿನುದ್ದಕ್ಕೂ ಆಚರಿಸಿಕೊಂಡು ಬಂದಿದ್ದಾರೆ. ಇಡೀ ವಿಶ್ವವೇ ಪರಸ್ಪರ ಪ್ರೀತಿಸುವ ಗುಣವನ್ನು ರೂಢಿಸಿಕೊಂಡರೆ ಇಡೀ ಸಮಾಜ ನೆಮ್ಮದಿಯಿಂದ ಇರಬಹುದು ಎಂದರು.

Advertisement

ಮನುಷ್ಯ ತನ್ನ ನೆಮ್ಮದಿಗಾಗಿ ಬೇರೆ ಗ್ರಹಗಳನ್ನು ಹುಡುಕಿಕೊಂಡು ಹೋಗುವಂತಾಗಬಾರದು ಎನ್ನುವ ಸ್ಟೀಫನ್ ಹಾಕಿಂಗ್ ಅವರ ಮಾತನ್ನು ಪ್ರಸ್ತಾಪಿಸಿ, ಮನುಷ್ಯ ಮನುಷ್ಯರ ನಡುವೆ ಸಹಿಷ್ಣುತೆ ರೂಢಿಸಿಕೊಳ್ಳದಿದ್ದರೆ ಸರ್ವನಾಶವಾಗುತ್ತದೆ. ಕೋಮು ಭಾವನೆ ಹೀಗೇ ಬೆಳೆದರೆ ಕುವೆಂಪು ಅವರ ವಿಶ್ವ ಮಾನವ ಆಶಯ ಈಡೇರುವುದು ಕಷ್ಟವಾಗುತ್ತದೆ ಎಂದರು.

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಈಡೇರಿಸಬೇಕಾಗಿದೆ.‌ ಗಾಂಧಿಯವರ ಆಶಯದಂತೆ ರಾತ್ರಿ 12 ಗಂಟೆಗೂ ನಮ್ಮ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಾಗಬೇಕಿದೆ ಎಂದರು.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ರಾಮಚಂದ್ರ ರಾಹಿ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ಕಾರ್ಯಾಧ್ಯಕ್ಷರಾದ ವಿಶುಕುಮಾರ್ , ನವದೆಹಲಿ ಸ್ಮಾರಕ ನಿಧಿ ಅಧ್ಯಕ್ಷರಾದ ಸಂಜೋಯ್ ಸಿಂಗ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement