ನವದೆಹಲಿ: ಭಗವದ್ಗೀತೆ ಅಥವಾ ಭಾಗವತದಂತಹ ಗ್ರಂಥಗಳಿಗೆ ಸಂಬಂಧಿಸಿದಂತೆ ಯಾರೂ ಹಕ್ಕುಸ್ವಾಮ್ಯ ಪಡೆಯಲು ಸಾಧ್ಯವಿಲ್ಲ, ಆದರೆ ಇವುಗಳನ್ನು ಆಧರಿಸಿ ರಚಿಸಲಾದ ಯಾವುದೇ ವಿವರಣೆ, ರೂಪಾಂತರ ಅಥವಾ ನಾಟಕ ಕೃತಿಗಳು ಹಕ್ಕುಸ್ವಾಮ್ಯ ರಕ್ಷಣೆ ಪಡೆಯಲು ಅರ್ಹವಾಗಿರುತ್ತವೆ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ಇಸ್ಕಾನ್‌ನ ಭಕ್ತಿವೇದಾಂತ ಬುಕ್ ಟ್ರಸ್ಟ್ ಸಲ್ಲಿಸಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು. ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ಇಸ್ಕಾನ್) ಸಂಸ್ಥಾಪಕರಾದ ಶ್ರೀಲ ಪ್ರಭುಪಾದರು ಈ ಟ್ರಸ್ಟ್ ಸ್ಥಾಪಿಸಿದ್ದರು.
ಹಕ್ಕುಸ್ವಾಮ್ಯ ಹೊಂದಿರುವ ಆ ಕೃತಿಗಳ ವಿಚಾರ ಹರಡುತ್ತಿದ್ದ ನಾಲ್ಕು ಜಾಲತಾಣಗಳು, ಐದು ಮೊಬೈಲ್ ಅಪ್ಲಿಕೇಷನ್‌ಗಳು ಹಾಗೂ ನಾಲ್ಕು ಇನ್‌ಸ್ಟಾಗ್ರಾಂ ಹ್ಯಾಂಡಲ್‌ಗಳ ವಿರುದ್ಧ ತಡೆಯಾಜ್ಞೆ ನೀಡಬೇಕೆಂದು ಟ್ರಸ್ಟ್ ಕೋರಿತ್ತು.
ವಾದವನ್ನು ಪರಿಗಣಿಸಿದ ನ್ಯಾ. ಸಿಂಗ್ ಟ್ರಸ್ಟ್‌ನ ಕೃತಿಗಳ ದೊಡ್ಡ ಪ್ರಮಾಣದ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಅಕ್ರಮವಾಗಿ ಪ್ರತಿಗಳ ನಕಲು ಮಾಡುವ ಕಾರ್ಯ ನಡೆದಿದೆ ಎಂದು ಹಕ್ಕುಸ್ವಾಮ್ಯ ಉಲ್ಲಂಘಿಸದಂತೆ ನಿರ್ಬಂಧ ವಿಧಿಸಿದರು. ಗೂಗಲ್ ಮತ್ತು ಮೆಟಾ ಅಪ್ಲಿಕೇಶನ್‌ಗಳು ಹಕ್ಕುಸ್ವಾಮ್ಯ ಉಲ್ಲಂಘಿಸಿರುವ ಪುಟಗಳನ್ನು ತೆಗೆದುಹಾಕಬೇಕು ಎಂದು ತಿಳಿಸಿದ ಪೀಠ ಅಧಿಕಾರಿಗಳನ್ನುಉದ್ದೇಶಿಸಿ, ಜಾಲತಾಣಗಳನ್ನು ನಿರ್ಬಂಧಿಸಿ ಆದೇಶ ರವಾನಿಸಬೇಕು ಎಂದು ಸೂಚಿಸಿತು.