ರಾಮ್‌ಪುರ(ಯುಪಿ): ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್, ಪತ್ನಿ ತಜೀಮ್ ಫಾತಿಮಾ ಹಾಗೂ ಪುತ್ರ ಅಬ್ದುಲ್ಲ ಆಜಂಗೆ ಇಲ್ಲಿನ ಜನಪ್ರತಿನಿಧಿಗಳ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶೋಭಿತ್ ಬನ್ಸಲ್, ಮೂವರು ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸಿದರು. ‘ಪುತ್ರ ಅಬ್ದುಲ್ಲ ಆಜಂ ಎರಡು ನಕಲಿ ಜನನ ಪ್ರಮಾಣಪತ್ರ ಪಡೆಯಲು ಆಜಂ ಖಾನ್ ಹಾಗೂ ತಜೀಮ್ ಫಾತಿಮಾ ನೆರವಾಗಿದ್ದರು. ಒಂದು ಪ್ರಮಾಣಪತ್ರವನ್ನು ಲಖನೌದಿಂದ ಹಾಗೂ ಮತ್ತೊಂದು ಪ್ರಮಾಣಪತ್ರವನ್ನು ರಾಮ್‌ಪುರದಿಂದ ಪಡೆಯಲಾಗಿದೆ’ ಎಂದು ಬಿಜೆಪಿ ಶಾಸಕ ಆಕಾಶ್ ಸಕ್ಸೇನಾ ದೂರು ನೀಡಿದ್ದರು. ಈ ದೂರಿನ ಅನ್ವಯ ಮೂವರ ವಿರುದ್ಧ 2019ರ ಜನವರಿ 3ರಂದು ರಾಮ್‌ಪುರದ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ರಾಮ್‌ಪುರ ಮುನ್ಸಿಪಾಲಿಟಿಯಲ್ಲಿ ನೀಡಿದ್ದ ಪ್ರಮಾಣಪತ್ರದಲ್ಲಿ ಅಬ್ದುಲ್ಲ ಅವರ ಜನ್ಮ ದಿನಾಂಕ 1993ರ ಜನವರಿ 1 ಎಂದು ನಮೂದಿಸಲಾಗಿದೆ. ಲಖನೌದಲ್ಲಿ ಪಡೆದಿದ್ದ ಪ್ರಮಾಣಪತ್ರದಲ್ಲಿ 1990ರ ಸೆಪ್ಟೆಂಬರ್ 30 ಎಂದು ನಮೂದಿಸಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.