ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಿದ್ದೇವೆ ಎಂದು ನಕಲಿ ಬಿಲ್ ಸೃಷ್ಟಿಸಿದ ವರ್ತಕರು ₹ 64 ಕೋಟಿ ಹೂಡುವಳಿ ತೆರಿಗೆ ಜಮೆ ಪಡೆದು ವಂಚಿಸಿದ್ದಾರೆ. ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುಮಾರು ಎರಡು ತಿಂಗಳು ಕಾರ್ಯಾಚರಣೆ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಈ ಸಂಗತಿಯನ್ನು ಪತ್ತೆ ಮಾಡಿದ್ದಾರೆ. ₹ 352 ಕೋಟಿ ಮೊತ್ತದ ವಹಿವಾಟಿನ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಈ ವಂಚನೆ ಮಾಡಿದ್ದಾರೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆಲವು ವರ್ತಕರು ವಹಿವಾಟು ನಡೆಸಿದಂತೆ ಬಿಲ್ ಸೃಷ್ಟಿಸಿ ಹೂಡುವಳಿ ತೆರಿಗೆ ಜಮೆಗೆ ಕೋರಿಕೆ ಸಲ್ಲಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸುತ್ತಿರುವ ಮಾಹಿತಿ ಲಭಿಸಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ವಂಚನೆ ಆಗಿರುವುದು ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ನಕಲಿ ಬಿಲ್ ತಯಾರಿಸುವುದು ಹಾಗೂ ತೆರಗೆ ವಂಚನೆ ಎಸಗುವುದು ಜಿಎಸ್‌ಟಿ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕೃತ್ಯ ಎಸಗುವವರ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಸದ್ಯ ಈ ಪ್ರಕರಣದಲ್ಲಿ ತೆರಿಗೆ ವಂಚಿಸಿದ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಂದು ಸಿ. ಶಿಖಾ ತಿಳಿಸಿದ್ದಾರೆ.