ನವದೆಹಲಿ : ಪವರ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಗೌತಮ್ ಅದಾನಿ ಪವರ್ ಎನರ್ಜಿಗೆ ಸೋಲಾರ್ ಪವರ್ ಎನರ್ಜಿ ಮೂಲಕ ಸೆಡ್ಡು ಹೊಡೆಯಲು ಉದ್ಯಮಿ ಅನಿಲ್ ಅಂಬಾನಿ ಮುಂದಾಗಿದ್ದರು. ಸಾಲ ಸುಳಿಯಿಂದ ಚೇತರಿಸಿಕೊಳ್ಳುತ್ತಿದ್ದ ಅನಿಲ್ ಅಂಬಾನಿಗೆ ಇದೀಗ ಸೋಲಾರ್ ಎನರ್ಜಿ ಕಾರ್ಪೋರೇಶನ್ ಆಫ್ ಇಂಡಿಯಾ(SECI) ಶಾಕ್ ನೀಡಿದೆ. ಅನಿಲ್ ಅಂಬಾನಿಯ ರಿಲಯನ್ಸ್ ಪವರ್ ಸೋಲಾರ್ ಎನರ್ಜಿಯನ್ನು 3 ವರ್ಷಗಳ ಕಾಲ ಬ್ಯಾನ್ ಮಾಡಿದೆ.
ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಅನಿಲ್ ಅಂಬಾನಿ ಕಂಪನಿಗಳು ಮುಳುಗುತ್ತಿದ್ದಂತೆ ಮತ್ತೆ ಪುಟಿದೇಳಲು ಹಲವು ಪ್ರಯತ್ನ ನಡೆಸಿದ್ದರು. ಇದರ ನಡುವೆ ನಡೆಸಿದ ಒಂದು ಪ್ರಯತ್ನ ರಿಲಯನ್ಸ್ ಪವರ್. ಸೋಲಾರ್ ಎನರ್ಜಿ ಕ್ಷೇತ್ರದಲ್ಲಿ ಹೂಡಿಕೆ ಮೂಲಕ ವಿಶ್ವದಲ್ಲೇ ಬಹು ಬೇಡಿಕೆ ಕಂಪನಿಯಾಗಿ ಮಾರ್ಪಡಿಸಲು ಅನಿಲ್ ಅಂಬಾನಿ ಎಲ್ಲಾ ಪ್ರಯತ್ನ ಮಾಡಿದ್ದರು. ಈ ವೇಳೆ SECI ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ರಿಲಯನ್ಸ್ ಪವರ್ ಪಾಲ್ಗೊಂಡಿತ್ತು. ಈ ವೇಳೆ ನೀಡಿದ ಬ್ಯಾಂಕ್ ಗ್ಯಾರೆಂಟಿ ನಕಲಿ ಎಂದು ಸಾಬೀತಾಗಿದೆ. ಅನಿಲ್ ಅಂಬಾನಿ ಸಾಲದಿಂದ ಹಲವು ಬ್ಯಾಂಕ್ ಖಾತೆಗಳು, ವಹಿವಾಟುಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಕೆಲ ಖಾತೆಗಳನ್ನು ವಶಕ್ಕೆ ಪಡೆಯಲಾಗಿತ್ತು.
ಈ ವೇಳೆ ರಿಲಯನ್ಸ್ ಪವರ್ ನಕಲಿ ಬ್ಯಾಂಕ್ ಗ್ಯಾರೆಂಟಿಯನ್ನು SECIಗೆ ಸಲ್ಲಿಕೆ ಮಾಡಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು. ಸೋಲಾರ್ ಎನರ್ಜಿಯ ಟೆಂಡರ್ ರಿಲಯನ್ಸ್ ಪವರ್ ಬಾಚಿಕೊಳ್ಳುವ ಎಲ್ಲಾ ಸಾಧ್ಯತೆ ಇತ್ತು. ಆದರೆ ಅಂತಿಮ ಹಂತದ ಟೆಂಡರ್ ಪ್ರಕ್ರಿಯೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ಈ ವೇಳೆ ರಿಲಯನ್ಸ್ ಪವರ್ ನೀಡಿದ ಬ್ಯಾಂಕ್ ಗ್ಯಾರೆಂಟಿ ನಕಲಿ ಅನ್ನೋದು ಪತ್ತೆಯಾಗಿದೆ. ರಿಲಯನ್ಸ್ ಪವರ್ ನಕಲಿ ಬ್ಯಾಂಕ್ ಗ್ಯಾರೆಂಟಿ ನೀಡಿದ ಕಾರಣ, ಸೋಲಾರ್ ಎನರ್ಜಿ ಟೆಂಡರ್ ಪ್ರಕ್ರಿಯೆಯಿಂದ ಅಮಾನತುಗೊಳಿಸಿದೆ. ಇಷ್ಟೇ ಅಲ್ಲ ಮುಂದಿನ ಮೂರು ವರ್ಷ ಸರ್ಕಾರದ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ರಿಲಯನ್ಸ್ ಪವರ್‌ಗೆ ನಿರ್ಬಂಧ ವಿಧಿಸಿದೆ. ಅನಿಲ್ ಅಂಬಾನಿ ಎಡವಟ್ಟು ಇದೊಂದೆ ಅಲ್ಲ, ಇತ್ತೀಚೆಗೆ ಸೆಬಿ ಕೂಡ ಅನಿಲ್ ಅಂಬಾನಿ ಮೇಲೆ ನಿಷೇಧ ಹೇರಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನಿಂದ ಹಣವನ್ನು ಬೇರೆಡೆ ವರ್ಗಾವಣೆ ಮಾಡಿದ ಆರೋಪದಡಿಯಲ್ಲಿ ಅನಿಲ್ ಅಂಬಾನಿ ಷೇರು ಮಾರ್ಕೆಟ್ ನಿಯಂತ್ರ ಸೆಬಿ 5 ವರ್ಷಗಳ ಕಾಲ ಟ್ರೇಡಿಂಗ್ ಮಾಡದಂತೆ ನಿರ್ಬಂಧಿಸಿತ್ತು. ಪ್ರಮುಖ ಉದ್ಯೋಗಿಗಳ ನೆರವಿನಿಂದ ಅನಿಲ್ ಅಂಬಾನಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಕಂಪನಿ ಹಣವನ್ನು ಬೇರೆಡೆಗೆ ತಿರುಗಿಸಿದ ಆರೋಪ ಕೇಳಿಬಂದಿತ್ತು.