ಚಿತ್ರದುರ್ಗ:ಚಿತ್ರದುರ್ಗ ನಗರದ ಎಲ್ಲಾ ಉದ್ಯಾನವನಗಳಲ್ಲಿ ಓಪನ್ ಜಿಮ್ ಮತ್ತು ಯೋಗದ ಪ್ಲಾಟ್‍ಫಾರಂಗಳನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಹೇಳಿದರು.
ಇಲ್ಲಿನ ದೊಡ್ಡಪೇಟೆಯ ಶ್ರೀ ವಾಸವಿ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಪತಂಜಲಿ ಯೋಗ ಸಂಸ್ಥೆಯ ವತಿಯಿಂದ “ನನ್ನ ಯೋಗ ನನ್ನ ಕ್ಷೇಮ” ಎನ್ನುವ ಧ್ಯೇಯದೊಂದಿಗೆ “ಸಹ ಯೋಗ ಶಿಕ್ಷಕರ ತರಬೇತಿ” ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವು ಜಾತಿರಹಿತವಾದದು ಮತ್ತು ಸಮಾಜದ ಎಲ್ಲಾ ವರ್ಗದ ಜನರ ಆರೋಗ್ಯಕ್ಕೆ ಅವಶ್ಯಕವಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಯೋಗವು ಜೀವನದ ಎಲ್ಲಾ ವಿಭಾಗಗಳಲ್ಲಿ ಅವಶ್ಯಕವಾಗಿದೆ ಎಂದರು.
ಉದ್ಯಮಿ ಭರತ್ ಕುಮಾರ್ ಮಾತನಾಡಿ, ಎಲ್ಲರೂ ಯೋಗವನ್ನು ಕಲಿತು ರೋಗ ಮುಕ್ತರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಂಸ್ಥೆಯ ದಕ್ಷಿಣ ಭಾರತದ ಪ್ರಭಾರಿ ಭವರಲಾಲ್ ಆರ್ಯ, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ, ವೈದ್ಯಾಧಿಕಾರಿ ರವಿಕುಮಾರ್, ವ್ಯಾಪಾರಿಗಳಾದ ಲತಾರವಿ, ಪತಂಜಲಿ ಸಂಸ್ಥೆಯ ಚಿತ್ರದುರ್ಗ ಪ್ರಭಾರಿಗಳಾದ ದೇವಾನಂದ ನಾಯ್ಕ್, ಶ್ರೀನಿವಾಸ್, ಗುರುಮೂರ್ತಿ, ಕೆಂಚವೀರಪ್ಪ, ಶ್ರೀರಾಮ್ ನರೇಶ್, ನವೀನ್, ಕೃಷ್ಣಮೂರ್ತಿ ಮತ್ತು ಯೋಗ ಶಿಕ್ಷಕರು ಇದ್ದರು.


































