ಬೆಂಗಳೂರು : ಈಗಾಗಲೇ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದು, ಬೆದರಿಕೆ ವಿಚಾರವಾಗಿ ನಿರ್ಮಾಪಕ ದಾಖಲಿಸಿದ್ದ ಕೇಸ್ ಇದೀಗ ಮರುಜೀವ ಪಡೆದುಕೊಂಡಿದೆ.
ಕೆಲ ವರ್ಷಗಳ ಹಿಂದೆ ದರ್ಶನ್, ಯುವ ನಿರ್ಮಾಪಕ ಭರತ್ ಅವರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ದೂರು ದಾಖಲಾಗಿತ್ತು. ಇದೀಗ 2022ರಲ್ಲಿ ದಾಖಲಾಗಿದ್ದ ಈ ಪ್ರಕರಣಕ್ಕೆ ಮತ್ತೆ ಮರು ಜೀವ ಸಿಕ್ಕಂತಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತಾಗಿ ಹೊಸದಾಗಿ ಎನ್‌ಸಿಆರ್ ದಾಖಲಾಗಿದ್ದು, ತನಿಖೆ ನಡೆಯುವ ಸಾಧ್ಯತೆ ಇದೆ.
ಈ ಹಿಂದೆ `ಭಗವಾನ್ ಶ್ರೀ ಕೃಷ್ಣಾ’ ಎಂಬ ಭರತ್ ನಿರ್ಮಾಣದ ಸಿನಿಮಾದಲ್ಲಿ ಧೃವನ್ ನಾಯಕನಾಗಿ ನಟಿಸುತ್ತಿದ್ದರು. 2020ರಲ್ಲಿ ಭರತ್ ಸಿನಿಮಾದ ಶೂಟಿಂಗ್ ಪ್ರಾರಂಭಿಸಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತುಹೋಗಿತ್ತು. ಬಳಿಕ ನಟ ಧೃವನ್, ದರ್ಶನ್ ಬಳಿ ಹೋಗಿ ಅವರ ಕೈಯಿಂದ ಭರತ್‌ಗೆ ಕರೆ ಮಾಡಿಸಿದ್ದರು. ಆರಂಭದಲ್ಲಿ ದರ್ಶನ್ ‘ಧ್ರುವನ್ ನಿಮ್ಮನ್ನೆ ನಂಬಿದ್ದಾನೆ, ಸಿನಿಮಾ ನಿಲ್ಲಿಸಬೇಡಿ’ ಎಂದು ಮನವಿ ಮಾಡಿದ್ದರು. ಬಳಿಕ ‘ಸಿನಿಮಾ ಮುಗಿಸದೇ ಇದ್ದರೆ, ಭೂಮಿ ಮೇಲೆ ಇಲ್ಲದಂತೆ ಮಾಡಿಬಿಡುತ್ತೇನೆ’ ಎಂದೆಲ್ಲ ಬೆದರಿಕೆ ಹಾಕಿ ಕೆಲವು ಅವಾಚ್ಯ ಶಬ್ದಗಳನ್ನು ಸಹ ಬಳಸಿದ್ದರು.
ಬಳಿಕ ಭರತ್ ಅವರು ತಮಗೆ ಕರೆ ಮಾಡಿ ದರ್ಶನ್ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಕರೆ ಮಾಹಿತಿ, ಕಾಲ್ ರೆಕಾರ್ಡ್ಗಳನ್ನು ಸಹ ಆಗ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದರು.