ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕಾರಾಗೃಹದಿಂದ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೇ ಕೋಟ್ಯಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಉಗ್ರ ಅಕ್ಟರ್ ಪಾಷಾನನ್ನು ಸೋಮವಾರ ರಾತ್ರಿ ನಾಗಪುರ್ ಜೈಲಿನಿಂದ ವಿಮಾನದ ಮೂಲಕ ಕರೆ ತಂದು ಹಿಂಡಲಗಾ ಕಾರಾಗೃಹಕ್ಕೆ ರವಾನಿಸಲಾಯಿತು. ಅಕ್ಟರ್ ಪಾಷಾ ಈ ಹಿಂದೆ ಬೆಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜು ಸ್ಪೋಟ ಪ್ರಕರಣದಲ್ಲಿಯೂ ಸಹ ಭಾಗಿಯಾಗಿದ್ದ. ಇತ್ತೀಚೆಗೆ ಬೆಳಗಾವಿ ನ್ಯಾಯಾಲಯದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಕೈದಿ ಜಯೇಶ್ ಪೂಜಾರಿಯಿಂದ ಹಿಂಡಲಗಾ ಕಾರಾಗೃಹದಿಂದಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ದೂರವಾಣಿ ಕರೆ ಮಾಡಿಸಿ 200 ಕೋಟಿ ರೂ. ನೀಡಬೇಕೆಂದು ಬೇದರಿಕೆ ಹಾಕಿಸಿದ್ದ. ಈ ಹಿನ್ನೆಲೆಯಲ್ಲಿ ಅಕ್ಟರ್ ಪಾಷಾ ಮತ್ತು ಜಯೇಶ್ ಪೂಜಾರಿಯನ್ನು ನಾಗಪುರ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜಯೇಶ್ ಪೂಜಾರಿಯನ್ನು ಕೆಲ ದಿನಗಳ ಹಿಂದೆಯೇ ಹಿಂಡಲಗಾಗೆ ರವಾನಿಸಿದ್ದ ನಾಗಪುರ್ ಪೊಲೀಸರು, ಈಗ ಉಗ್ರ ಅಕ್ಟರ್ ಪಾಷಾನನ್ನು ನಾಗಪುರ್ ಕೇಂದ್ರ ಕಾರಾಗೃಹದಿಂದ ವಿಮಾನದ ಮೂಲಕ ಬೆಳಗಾವಿಗೆ ಕರೆತಂದು ಬಿಗಿ ಪೊಲೀಸ್ ಬಂದೋಬಸ್ತನಲ್ಲಿ ಹಿಂಡಲಗಾ ಕಾರಾಗೃಹಕ್ಕೆ ರವಾನಿಸಿದ್ದಾರೆ. ಹಾಗೂ ಪರಪ್ಪಾನ ಅಗ್ರಹಾರ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ರಾಜಾತಿಥ್ಯ ಸಿಗುತ್ತಿರುವ ವಿಚಾರ ಬಯಲಾದ ಬಳಿಕ ತೀವ್ರ ಮುಜುಗರ ಅನುಭವಿಸುತ್ತಿರುವ ಸರಕಾರ ದರ್ಶನ್ ಮತ್ತು ಗ್ಯಾಂಗ್ ಅನ್ನು ನಟೋರಿಯಸ್ ಕೈದಿಗಳು ಇರುವ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಬಹುತೇಕ ಇಂದೇ ದರ್ಶನ್ ಮತ್ತು ಗ್ಯಾಂಗ್ ಹಿಂಡಲಗಾ ಜೈಲಿಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್ ಮತ್ತು ಗ್ಯಾಂಗನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ನಟೋರಿಯಸ್ ಹಿಂಡಲಗಾ ಜೈಲಿನ ‘ಅಂಧೇರಾ’ ಸೆಲ್‌ಗಳಿಗೆ ದರ್ಶನ್ ಮತ್ತು ಗ್ಯಾಂಗ್ ಸ್ಥಳಾಂತರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.