ಲಕ್ನೋ: ಗುಂಪೊಂದು ಸಬ್ ಇನ್ಸ್ ಪೆಕ್ಟರ್ ನ್ನು ರಸ್ತೆಯಲ್ಲೇ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಸೋಮವಾರ(ಅ.30 ರಂದು) ನಡೆದಿದೆ.
ಯುಪಿ ಪೊಲೀಸ್‌ನ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ರಾಮ್ ಅವತಾರ್ ಅವರಿಗೆ ಗುಂಪೊಂದು ಥಳಿಸಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹೋಬಾದ ಪನ್ವಾರಿ ಪ್ರದೇಶದಲ್ಲಿ 13 ವರ್ಷದ ಬಾಲಕ ಬಸ್ಸಿನಡಿ ಸಿಲುಕಿ ಸಾವನ್ನಪ್ಪಿದ್ದ. ಇದಕ್ಕೆ ಸಂಬಂಧಿಸಿ ಮೃತನ ಬಾಲಕನ ಸಂಬಂಧಿಗಳು ಹಾಗೂ ಕೆಲ ಸ್ಥಳೀಯರು ರಸ್ತೆಯಲ್ಲಿ ನಿಂತು ಚಾಲಕನ ವಿರುದ್ಧ ಕ್ರಮಕ್ಕೆ ಹಾಗೂ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯ ಕಾರಣದಿಂದ ರಸ್ತೆಯಲ್ಲಿ ಸಂಚಾರ ದಟ್ಟನೆ ಉಂಟಾಗಿತ್ತು. ಇದರಿಂದ ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳಕ್ಕೆ ಸಬ್-ಇನ್ಸ್‌ಪೆಕ್ಟರ್ ರಾಮ್ ಅವತಾರ್ ತನ್ನ ತಂಡದೊಂದಿಗೆ ಆಗಮಿಸಿದ್ದರು. ಈ ವೇಳೆ ಎಸ್ ಐ ಹಾಗೂ ಮೃತ ಬಾಲಕನ ಸಂಬಂಧಿಕರ ನಡುವ ಮಾತಿನ ಚಕಮಕಿ ಉಂಟಾಗಿದ್ದು, ಮೊದಲೇ ಸಿಟ್ಟಾಲಿದ್ದ ಜನ ಸಬ್-ಇನ್ಸ್‌ಪೆಕ್ಟರ್ ರಾಮ್ ಅವತಾರ್ ಅವರ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ರಾಮ್ ಅವತಾರ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಒದ್ದು, ಕೋಲುಗಳಿಂದ ಹಲ್ಲೆ ಮಾಡಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಇತರ ಮೂವರು ಪೊಲೀಸರು ಅಲ್ಲಿಂದ ಓಡಿಹೋಗಿದ್ದಾರೆ. ಇದಾದ ಬಳಿಕ ಘಟನಾ ಸ್ಥಳಕ್ಕೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮತ್ತು ಪ್ರದೇಶದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಸ್ಥಳಕ್ಕೆ ಆಗಮಿಸಿ ಗುಂಪನ್ನು ಶಾಂತಗೊಳಿಸಿದ್ದಾರೆ. ನಂತರ ರಾಮ್ ಅವತಾರ್ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಇಬ್ಬರು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ವರದಿ ತಿಳಿಸಿದೆ.