ಚಿಕ್ಕಬಳ್ಳಾಪುರ: ನನ್ನನ್ನು ಅಧಿಕಾರದಿಂದ ಹೇಗಾದರೂ ಮಾಡಿ ಕೆಳಗಿಳಿಸಲೇಬೇಕೆಂದು ದೊಡ್ಡ ದೊಡ್ಡ ನಾಯಕರು ಹಗಲಿರುಳು ಯತ್ನಿಸುತ್ತಿದ್ದಾರೆ. ಆದರೆ, ಜನರ ಪ್ರೀತಿ-ವಿಶ್ವಾಸ ನನ್ನ ಮೇಲಿರುವವರೆಗೂ ಅವರ ಯತ್ನ ಫಲಿಸದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರಕ್ಕೆಂದು ಇಂದು ರಾಜ್ಯಕ್ಕೆ ಆಗಮಿಸಿದ ಅವರು ಚಿಕ್ಕಬಳ್ಳಾಪುರದ ಅಗಲಗುರ್ಕಿ ಗ್ರಾಮದ ಬಳಿ ಏರ್ಪಡಿಸಲಾದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾತನಾಡುವ ಮೂಲಕ ಐ ಎನ್ ಡಿ ಐ ಎ ನಾಯಕರಿಗೆ ಮತ್ತೊಮ್ಮೆ ಚಾಟಿ ಬೀಸಿದರು. ಪ್ರಧಾನಿ ಭಾಷಣದ ಹೈಲೈಟ್ಸ್ * ಚಿಕ್ಕಬಳ್ಳಾಪುರದ ಮಹಾಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದರು ಪ್ರಧಾನಿ * ವಿಕಸಿತ ಭಾರತದ ಅಭಿಯಾನದಲ್ಲಿ ಪ್ರತಿಯೊಬ್ಬರೂ ಪಾಲುದಾರರಾಗಬೇಕು. * ದೇಶದ ಅಭಿವೃದ್ಧಿಗೆ ಎನ್ ಡಿ ಎ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಈಗಾಗಲೇ ಜಾರಿಗೆ ತಂದಿದೆ. ಆದರೆ, ಜನ ವಿರೋಧಿ ಮತ್ತು ರೈತ ವಿರೋಧಿ ಕಾಂಗ್ರೆಸ್ ಪಕ್ಷ ಕೇಂದ್ರದ ಯೋಜನೆಗಳಿಗೆ ಅಡ್ಡಿಪಡಿಸುತ್ತಿದೆ. * ಬಿಜೆಪಿ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ಯೋಜನೆಯ ಜೊತೆ ಅರ್ಹ ರೈತರಿಗೆ ಕೇಂದ್ರದಿಂದ ತಲಾ ನಾಲ್ಕು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಆದರೆ, ಇಲ್ಲಿನ ಕಾಂಗ್ರೆಸ್ ಸರ್ಕಾರ ಅದನ್ನು ಬಂದ್ ಮಾಡಿತು. * ದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು ಇಪ್ಪತೈದು ಕೋಟಿ ಜನರ ಬದುಕು ಹಸನಾಗಲು ಈ ಸಮುದಾಯದ ಕಲ್ಯಾಣಕ್ಕೆ ಯೋಜನೆ ರೂಪಿಸಿದ್ದೇವೆ. * ಆದಿವಾಸಿ ಸಮುದಾಯಕ್ಕೆ ಸೇರಿದ ಓರ್ವ ಮಹಿಳಾ ಮಣಿಯನ್ನು ಗುರುತಿಸಿ ರಾಷ್ಟ್ರಪತಿಯಂಥ ಉನ್ನತ ಹುದ್ದೇಗೆ ಏರಿಸಲಾಗಿದ್ದುದು ನಮ್ಮ ಸಾಧನೆ ಮತ್ತು ಮಹಿಳೆಯರ ಮೇಲಿನ ಗೌರವವಾಗಿದೆ. * ಉಚಿತ ಪಡಿತರ ಹಂಚಿಕೆ, ಆಯುಷ್ಮಾನ್ ಭಾರತ್ ಸೇರಿದಂತೆ ಮತ್ತಿತರ ಕೇಂದ್ರದ ಯೋಜನೆಗಳನ್ನು ಇದೇ ವೇಳೆ ವಿವರಿಸಿದ ಪ್ರಧಾನಿ ಈ ಬಾರಿಯೂ ರಾಜ್ಯ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಲ್ಲಿ ಎನ್ ಡಿ ಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡರು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಡಿವಿ ಸದಾನಂದಗೌಡ, ಸಚಿವೆ ಶೋಭಾ ಕರಂದ್ಲಾಜೆ, ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ದಂಸದರು, ಶಾಸಕರು ಮತ್ತಿತರ ಬಿಜೆಪಿ- ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು. ಚಿಕ್ಕಬಳ್ಳಾಪುರದ ಸಮಾವೇಶದ ಬೆಮನಗಳೂರಿನತ್ತ ತೆರಳಿದ ಪ್ರಧಾನಿಯವರು ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯಲ್ಲಿ ಮಳೆ ಸಿಂಚನವಾದಾಗ ಪ್ರಧಾನಿ ಮೋದಿ ಆಗಮನದಿಂದ ರಾಜ್ಯದಲ್ಲಿ ಮಳೆ ಬಂದಿತು ಅಂತಾ ಮೋದಿ ಅಭಿಮಾನಿಗಳು ಉದ್ಘಾರ ತೆಗೆದದ್ದು ಕಂಡು ಬಂತು.