ಮೈಸೂರು: ನನ್ನ ದಾಖಲೆ ನಕಲಿ ಎಂಬುದಾದರೆ, ಸಿಎಂ ನನ್ನ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಿ. ಇದನ್ನು ಬಿಟ್ಟು ಜನರಿಗೆ ಪ್ರಚೋದನೆ ನೀಡುವುದು ಸರಿಯಲ್ಲ ಎಂದು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸ್ನೇಹಮಯಿ ಕೃಷ್ಣ ಟಾಂಗ್ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ದೂರದಾರ ಸ್ನೇಹಮಯಿ ಕೃಷ್ಣ ವಿರುದ್ಧವೇ ನಿನ್ನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ನಕಲಿ ದಾಖಲೆ ಸೃಷ್ಟಿ ಎಂಬ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ಕಾಂಗ್ರೆಸ್ ವಕ್ತಾರ ಸಲ್ಲಿಸಿರುವ ದೂರಿನಲ್ಲಿ ಹುರುಳಿಲ್ಲ. ನನಗೆ ಆ ಎಫ್‌ಐಆರ್‌ನಿಂದ ಸಂತೋಷವಾಗಿದೆ. ಸಿಎಂ ಹಾಗೂ ಸಿಎಂ ಪತ್ನಿ ಈಗ ದೇವರಾಜ ಪೊಲೀಸ್ ಠಾಣೆಗೂ ಬರಬೇಕಾಗುತ್ತದೆ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಖುದ್ದು ಸಿಎಂಗೆ ಸಂಕಷ್ಟ ಜಾಸ್ತಿ ಮಾಡ್ತಿದ್ದಾರೆ ಎಂದು ತಿಳಿಸಿದರು.
ನಾನು ಆರೋಪಿಸಿರುವುದು ಸಿಎಂ ಮತ್ತು ಅವರ ಪತ್ನಿ ವಿರುದ್ಧ. ಆದರೆ, ಅವರು ನನ್ನ ವಿರುದ್ಧ ದೂರು ಕೊಡುತ್ತಿಲ್ಲ. ಲಕ್ಷ್ಮಣ್ ಅವರು ಮಾಡ್ತಿದ್ದಾರೆ. ಇವರ ದೂರಿನ ಮೇಲೆ ನನಗೆ ಅನುಮಾನವಿದೆ. ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ನಿಲ್ಲಿಸಿ ಸಿದ್ದರಾಮಯ್ಯ ಅವರು ಸೋಲಿಸಿದ್ದಾರೆಂಬ ಬೇಸರಕ್ಕೆ ಈ ರೀತಿ ಮಾಡಿದ್ದಾರೆ. ಸ್ವತಃ ಸಿಎಂ ಅವರನ್ನೇ ಸಿಕ್ಕಿಹಾಕಿಸುವ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.