ತೆಲಂಗಾಣದಲ್ಲಿ ಚುನಾವಣಾ ಕಾವು ಜೋರಾಗಿ ನಡೆದಿದೆ. ಬಿಜೆಪಿ, ಕಾಂಗ್ರೆಸ್, ಕೆಸಿಆರ್ ಹಾಗೂ ಎಐಎಂಐಎಂ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಪ್ರಚಾರದ ವೇಳೆ ಸಮಯ ಮೀರಿ ಮಾತನಾಡುತ್ತಿದ್ದ ಎಐಎಂಐಎಂ ಪಕ್ಷದ ನಾಯಕ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬೆದರಿಕೆ ಹಾಕಿ ಸ್ಥಳದಿಂದ ಹೊರ ಹೋಗುವಂತೆ ಆವಾಜ್ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ನಿನ್ನೆ ಹೈದರಾಬಾದ್‌ನ ಲಲಿತಾಬಾಗ್‌ನಲ್ಲಿ ಪ್ರಚಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬೆದರಿಕೆ ಹಾಕಿದ್ದಾರೆ. ಮಾದರಿ ನೀತಿ ಸಂಹಿತೆ ಪ್ರಕಾರ ಸಮಯಕ್ಕೆ ಸರಿಯಾಗಿ ಸಭೆ ಮುಗಿಸುವಂತೆ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದರು. ಇದರಿಂದ ರೊಚ್ಚಿಗೆದ್ದ ಅಕ್ಬರುದ್ದೀನ್ ಓವೈಸಿ, ಇನ್ಸ್‌ಪೆಕ್ಟರ್ ಸಾಹೇಬ್ರೇ ನನ್ನ ಬಳಿಯೂ ವಾಚ್ ಇದೆ. ನನಗೂ ಸಮಯ ಗೊತ್ತಾಗುತ್ತದೆ. ಪಿಸ್ತೂಲು ಚಾಕುವಿಗೆ ನಾವು ಹೆದರುವುದಿಲ್ಲ, ನೀವು ಇಲ್ಲಿಂದ ಹೊರಡಿ ಎಂದು ಧಮ್ಕಿ ಹಾಕಿದ್ದಾನೆ. ಬಳಿಕ ಮತ್ತೆ ಮಾತು ಮುಂದುವರಿಸಿದ ಓವೈಸಿ, ನಾನು ಇನ್ನೂ ಐದು ನಿಮಿಷ ಮಾತನಾಡುತ್ತೇನೆ ಯಾರು ಏನು ಮಾಡುತ್ತಾರೆ ನೋಡುತ್ತೇನೆ ಎಂದು ಹೇಳಿದ್ದಾರೆ. ನನ್ನನ್ನು ತಡೆಯುವವರು ಇಲ್ಲಿ ಯಾರೂ ಇಲ್ಲ ಎಂದು ಹೇಳಿದ್ದಾರೆ.