ಬೆಂಗಳೂರು: ನನ್ನ, ಸಿಎಂ ಮೇಲೆ ನಮ್ಮ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ. ಇದು ನಮ್ಮ ಸರ್ಕಾರವನ್ನು ನಾಶ ಮಾಡಬೇಕು ಅಂತಾ ರಾಜಕೀಯದಲ್ಲಿ ಇರುವವರೇ ಮಾಡಿಸುತ್ತಿರುವ ಯಾಗ ಅದಕ್ಕಾಗಿ ಅಘೋರಿಗಳ ಮೊರೆ ಹೋಗಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆತಂಕಕಾರಿ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ.
ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮತ್ತು ಮುಖ್ಯಮಂತ್ರಿಗಳ ಮೇಲೆ, ನಮ್ಮ ಸರ್ಕಾರದ ವಿರುದ್ಧ ಯಾಗ ನಡೆಯುತ್ತಿದೆ. ದೊಡ್ಡ ಮಟ್ಟದ ಪೂಜೆ ನಡೆಯುತ್ತಿದೆ. ಯಾವ ಪೂಜೆ ಮಾಡ್ತಿದ್ದಾರೆ? ಯಾರು ಮಾಡ್ತಿದ್ದಾರೆ? ಎಲ್ಲಿ ಮಾಡ್ತಿದ್ದಾರೆ? ಎಂದು ಎಲ್ಲವನ್ನು ಬರೆದುಕೊಟ್ಟಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.
ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸುಪಾಸಿನಲ್ಲಿ ಶತ್ರು ನಾಶಕ್ಕಾಗಿ ಶತ್ರು ಭೈರವಿ ಯಾಗ ನಡೆಯುತ್ತಿದೆ. ನಮ್ಮ ಸರ್ಕಾರವನ್ನು ನಾಶ ಮಾಡಬೇಕು ಅಂತ ಅಘೋರಿಗಳ ಮೊರೆ ಹೋಗಿದ್ದಾರೆ.ಇದೆಲ್ಲವನ್ನ ಯಾರು ಮಾಡಿಸುತ್ತಿದ್ದಾರೆ ಅನ್ನುವುದು ನಮಗೆ ಗೊತ್ತಿದೆ. ಅವರ ನಂಬಿಕೆ ಅವರು ಮಾಡಲಿ. ಆದ್ರೆ ನಾವು ನಂಬಿರುವ ದೇವರು ನಮ್ಮನ್ನ ಕಾಪಾಡುತ್ತದೆ ಎಂದು ಹೇಳಿದ್ದಾರೆ.
ಶತ್ರು ಸಂಹಾರ ಯಾಗ ಮಾಡಿಸುವುದಕ್ಕಾಗಿಯೇ 5 ಹಂದಿ, 3 ಎಮ್ಮೆ, 21 ಕಪ್ಪು ಬಣ್ಣದ ಕುರಿ, 21 ಮೇಕೆಗಳನ್ನ ಬಲಿ ಕೊಡ್ತಿದ್ದಾರೆ. ಇದೆಲ್ಲವನ್ನು ರಾಜಕೀಯದಲ್ಲಿ ಇರುವವರೇ ಮಾಡೋದು. ಆದ್ರೆ ಈ ಬಗ್ಗೆ ಸದ್ಯಕ್ಕೆ ನಾನು ಏನೂ ಮಾತಾಡೋದಿಲ್ಲ ಎಂದರು.
ಕಿಡಿಗೇಡಿಗಳು ಶತ್ರು ಸಂಹಾರ ಯಾಗ ಮಾಡ್ತಿದ್ದಾರೆ. ಆದ್ರೆ ನಮ್ಮ ದೇವರ ಕೃಪೆ ಬಹಳ ಜೋರಾಗಿದೆ. ನಾನು ಹೊರಗೆ ಹೋಗುವ ಪ್ರತಿದಿನ ದೇವರಿಗೆ ಕೈ ಮುಗಿದು ಹೋಗ್ತೀನಿ. ಅದಕ್ಕೆ ಇಷ್ಟು ರಕ್ಷಣೆ ಎಲ್ಲಾ ಇದೆ ಎಂದ ಅವರು ಶತ್ರು ಸಂಹಾರ ಯಾಗದ ಬಗ್ಗೆ ಚೀಟಿಯಲ್ಲಿ ಬರೆದುಕೊಂಡಿದ್ದನ್ನ ಮಾಧ್ಯಮಗಳ ಮುಂದೆ ಹೇಳಿದ್ದಾರೆ.