ಬೆಳಗಾವಿ:ನೂರಕ್ಕೂ ಹೆಚ್ಚು ಗೂಂಡಾಗಳ ಮೂಲಕ ನನ್ನ ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬೆಂಬಲಿಗರ ವಿರುದ್ಧ ಬೆಳಗಾವಿ ಶಹಾಪೂರ ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಶಾಸಕ ಸಂಜಯ್ ಪಾಟೀಲ್ ಅವರು, ಗೂಂಡಾಗಳು ಅವಾಚ್ಛ ಶಬ್ಧಗಳಿಂದ ನಿಂದಿಸಿದ್ದು, ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಗಾಜಿನ ಬಾಟಲ್, ಕಲ್ಲುಗಳನ್ನು ಹಿಡಿದು ಮನೆಯೊಳಗೆ ನುಗ್ಗಲು ಯತ್ನಿಸಿದ್ದು, ಬೆಲೆಬಾಳುವ ವಸ್ತುಗಳನ್ನು ನಾಶ ಮಾಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ಇದಕ್ಕೆಲ್ಲ ನೇರವಾಗಿ ಅವರೇ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದರು.
ಗೂಂಡಾಗಳು ನಮ್ಮ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಪ್ರಚೋದನೆ ನೀಡಿದವರು ಮತ್ತು ನನ್ನ ಕೊಲೆಗೆ ಯತ್ನಿಸಿದವರು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದೇನೆ. ಇನ್ನು ಸಂಜಯ್ ಪಾಟೀಲ್ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಆಯಿಷಾ ಸನದಿ, ಸುಜಯ್ ಜಾಧವ್, ಜಯಶ್ರೀ ಸೂರ್ಯವಂಶಿ, ಪ್ರಭಾವತಿ ಮಾಸ್ತಮರಡಿ, ರೋಹಿಣಿಬಾಬ್ಟೆ, ಮುಷ್ತಾಕ್ ಮುಲ್ಲಾ, ಸದ್ದಾಂ, ಶಂಕರಗೌಡ ಪಾಟೀಲ, ಸಂಗನಗೌಡ ಪಾಟೀಲ್, ಭಾರತಿ ಸೇರಿ ನೂರಕ್ಕೂ ಅಧಿಕ ಜನರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ.