ಸುಪ್ರೀಂ ಕೋರ್ಟ್ ಆವರಣದಲ್ಲೇ ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗ ಜೋಡಿ, ನಾವು ಮುಂದೆ ಹೋರಾಟಕ್ಕೆ ಮರಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ನಮ್ಮ ಹಕ್ಕನ್ನು ಕೋರ್ಟ್ ನಿರಾಕರಿಸಿದೆ. ಅದರಿಂದ ನಮಗೆ ನೋವುಂಟಾಗಿದೆ. ಮುಂದೆ ನಮಗೆ ಗೆಲುವು ಸಿಗಲಿದೆ ಎಂದು ಸಲಿಂಗ ಜೋಡಿ ಹೇಳಿದೆ. ಭಾರತದಲ್ಲಿ ಸಲಿಂಗ ವಿವಾಹದ ಮಾನ್ಯತೆ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿರುವ ಅನನ್ಯ ಕೊಟಿಯಾ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಮುಖ್ಯ ನ್ಯಾಯಮುರ್ತಿ ಡಿವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್. ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಮಂಗಳವಾರ ಅಕ್ಟೋಬರ್ 17 ತೀರ್ಪು ಪ್ರಕಟಿಸಿ, ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿತು. ಈ ವಿಚಾರದಲ್ಲಿ ಸಂಸತ್ತು ತೀರ್ಮಾನಿಸಬೇಕು ಮತ್ತು ಹೊಸ ವಿವಾಹ ವ್ಯವಸ್ಥೆಯನ್ನು ರಚಿಸುವಂತೆ ಸಂಸತ್ತು ಅಥವಾ ಸರ್ಕಾರವನ್ನು ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಲಿಂಗ ವಿವಾಹ ಮಾನ್ಯತೆಯ ನಿರ್ಧಾರವನ್ನು ನ್ಯಾಯಾಲಯ ಸರ್ಕಾರಕ್ಕೆ ಬಿಟ್ಟಿದೆ. ಇದೀಗ ಕೋರ್ಟಿನ ತೀರ್ಪಿನ ಬಗ್ಗೆ ಪತ್ರಿಕ್ರಿಯೆ ನೀಡಿರುವ ಅನನ್ಯ ತಮ್ಮ ಸಂಗಾತಿ ಉತ್ಕರ್ಷ್ ಸಕ್ಸೆನಾ ಜತೆ ಸುಪ್ರೀಂಕೋರ್ಟ್ ಆವರಣಕ್ಕೆ ತೆರಳಿ, ಕೋರ್ಟ್ ಮುಂದೆ ಮಂಡಿಯೂರಿ ನಿಶ್ಚಿತಾರ್ಥದ ರಿಂಗ್ ವಿನಿಮಯ ಮಾಡಿಕೊಂಡ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸಲಿಂಗ ವಿವಾಹದ ನಿರ್ಧಾರವೂ ಕೇಂದ್ರ ಸರ್ಕಾರದ ಅಂಗಳದಲ್ಲಿದೆ.