ಚಿತ್ರದುರ್ಗ : ದೇಶದ ಅಭಿವೃದ್ದಿ, ರಕ್ಷಣೆ, ವಿಶ್ವದ ಬೇರೆ ಬೇರೆ ದೇಶಗಳ ಜೊತೆ ಸ್ನೇಹ ಸಂಬಂಧ, ವ್ಯಾಪಾರ ವಹಿವಾಟಿಗೆ ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಬೇಕಾಗಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳ ಮತದಾರರಲ್ಲಿ ಮನವಿ ಮಾಡಿದರು.
ಚಳ್ಳಕೆರೆ ಟೋಲ್ಗೇಟ್ ಸಮೀಪವಿರುವ ಈಡಿಗರ ಹಾಸ್ಟೆಲ್ ಹಿಂಭಾಗದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ನಂತರ ಮಾತನಾಡಿದ ಗೋವಿಂದ ಕಾರಜೋಳರವರು ಬರುವ 19 ರಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಪ್ರಚಾರಕ್ಕಾಗಿ ಬರುತ್ತಿದ್ದಾರೆ. ಅನೇಕ ನಾಯಕರುಗಳು ಈಗಾಗಲೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ನನ್ನ ಪರ ಮತಯಾಚನೆ ಆರಂಭಿಸಿದ್ದಾರೆ. ಕಾಂಗ್ರೆಸ್ನಲ್ಲಿ ದೇಶದ ಪ್ರಧಾನಿಯಾಗುವ ಅರ್ಹತೆ ಯಾರಿಗೂ ಇಲ್ಲದಂತಾಗಿದೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಭಾರತ ಐದನೆ ಸ್ಥಾನದಲ್ಲಿದ್ದು, ಇನ್ನು ಮೂರು ವರ್ಷಗಳಲ್ಲಿ ಭಾರತ ಮೂರನೆ ಸ್ಥಾನಕ್ಕೆ ಬರಲಿದೆ ಎಂದು ಹೇಳಿದರು.
ಇದೆ ತಿಂಗಳ 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಜನ ನನ್ನನ್ನು ಗೆಲ್ಲಿಸಿ ಪಾರ್ಲಿಮೆಂಟ್ಗೆ ಕಳಿಸಿಕೊಟ್ಟರೆ ಪ್ರಧಾನಿ ಮೋದಿ ಜೊತೆ ಕುಳಿತುಕೊಳ್ಳುತ್ತೇನೆನ್ನುವುದು ಕ್ಷೇತ್ರದ ಹತ್ತೊಂಬತ್ತು ಲಕ್ಷ ಜನರಿಗೆ ಮನವರಿಕೆಯಾಗಿದೆ. ಬಿಟ್ಟಿ ಭಾಗ್ಯಗಳ ಆಸೆ ತೋರಿಸಿ ವಿಧಾನಸಭೆ ಚುನಾವಣೆಯಲ್ಲಿ ಮೋಸದಿಂದ ಕಾಂಗ್ರೆಸ್ ಗೆದ್ದಿದೆ. ಚಿತ್ರದುರ್ಗ ವಿಧಾನಸಭೆ ಚುನಾವಣೆಯಲ್ಲಿ ಜಿ.ಹೆಚ್.ತಿಪ್ಪಾರೆಡ್ಡಿ ಅಭಿವೃದ್ದಿ ಕೆಲಸ ಮಾಡಿಲ್ಲ ಎಂದು ಸೋತಿಲ್ಲ. ಕಾಂಗ್ರೆಸ್ನ ಕುತಂತ್ರದಿಂದ ಸೋತಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಆಸೆ ಆಮಿಷಗಳಿಗೆ ಬಲಿಯಾಗದೆ ಬಿಜೆಪಿ.ಗೆ ಮತ ಚಲಾಯಿಸಿ ನನ್ನನ್ನು ಬಹುಮತಗಳಿಂದ ಗೆಲ್ಲಿಸಿ ಎಂದು ಗೋವಿಂದ ಕಾರಜೋಳ ಜನತೆಯಲ್ಲಿ ವಿನಂತಿಸಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ರಾಜ್ಯ ಬಿಜೆಪಿ. ಸರ್ಕಾರದಲ್ಲಿ ಗೋವಿಂದ ಕಾರಜೋಳರವರು ಮಂತ್ರಿಯಾಗಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಲೋಕೋಪಯೋಗಿ, ಸಮಾಜ ಕಲ್ಯಾಣ, ನೀರಾವರಿ ಹೀಗೆ ಹತ್ತು ಹಲವಾರು ಖಾತೆಗಳಲ್ಲಿದ್ದಾಗ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿ ಕೈಗೊಂಡಿದ್ದಾರೆ. ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಮಂಜೂರು ಮಾಡುವಲ್ಲಿ ಇವರ ಪಾತ್ರ ಸಾಕಷ್ಟಿದೆ. ರೈತರಿಗೆ ಅನೇಕ ಚೆಕ್ಡ್ಯಾಂಗಳನ್ನು ಕಟ್ಟಿಸಿದ್ದಾರೆ. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತರುವುದಕ್ಕಾಗಿ 593 ಕೋಟಿ ರೂ.ಗಳನ್ನು ನೀಡಿ ಓವರ್ಹೆಡ್ ಟ್ಯಾಂಕ್ ಕಟ್ಟಿಸಿದ್ದಾರೆ. ಜಗತ್ತಿನಲ್ಲಿ ಮೋದಿ ನಂ.ಒನ್ ಪ್ರಧಾನಿ ಎನಿಸಿಕೊಂಡಿದ್ದಾರೆ. ಉಕ್ರೇನ್-ರಷ್ಯ ನಡುವೆ ಯುದ್ದ ನಡೆದಾಗ ನಮ್ಮ ದೇಶದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದ ಕೀರ್ತಿ ನರೇಂದ್ರಮೋದಿಗೆ ಸಲ್ಲುತ್ತದೆ. ಹಾಗಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೋವಿಂದ ಕಾರಜೋಳರವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಶಕ್ತಿ ಕೇಂದ್ರದ ಚುನಾವಣಾ ಉಸ್ತುವಾರಿ ಡಾ.ಸಿದ್ದಾರ್ಥ, ಬಿಜೆಪಿ. ನಗರಾಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ, ಮಹಿಳಾ ಮೋರ್ಚಾದ ಕವನ, ಪೂರ್ಣಿಮ, ದಿಶಾ, ಧನಂಜಯ, ಕೃಷ್ಣ ಸೇರಿದಂತೆ ಇತರೆ ಪದಾಧಿಕಾರಿಗಳು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.