ಲಕ್ನೋ: ವಿಶ್ವಕಪ್ ಪಂದ್ಯ ಮುಗಿದರೂ ಚರ್ಚೆಗಳು ಮಾತ್ರ ಇನ್ನೂ ಮುಗಿದಿಲ್ಲ. ವಿಶ್ವಕಪ್ ಫೈನಲ್ ಪಂದ್ಯವು ರಾಜಕೀಯ ತಿರುವನ್ನು ಸಹ ಪಡೆದುಕೊಂಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯ ಬಳಿಕ ಇದೀಗ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ವಿಶ್ವಕಪ್ ಫೈನಲ್ ನಡೆದ ನರೇಂದ್ರ ಮೋದಿ ಕ್ರೀಡಾಂಗಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಟಾವಾ ಜಿಲ್ಲೆಯಲ್ಲಿ ಮಾತನಾಡಿ ಅವರು, ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದ ಬದಲಿಗೆ ಲಕ್ನೋದಲ್ಲಿ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ನಡೆದಿದ್ದರೆ ಭಾರತ ತಂಡ ಗೆಲ್ಲುತ್ತಿತ್ತು. ಲಕ್ನೋದಲ್ಲಿ ನಡೆದಿದ್ದರೆ ಭಾರತ ತಂಡಕ್ಕೆ ಭಗವಾನ್ ವಿಷ್ಣು ಹಾಗೂ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶೀರ್ವಾದ ದೊರೆಯುತ್ತಿತ್ತು ಎಂದು ತಿಳಿಸಿದರು.
ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ನಲ್ಲಿ ಕೆಲ ಸಮಸ್ಯೆಗಳಿವೆ. ಆದ್ದರಿಂದ ಆಟಗಾರರ ಸಿದ್ಧತೆ ಪೂರ್ಣವಾಗಿರಲಿಲ್ಲ ಎಂದು ನಾವು ಕೇಳಿದ್ದೇವೆ ಎಂದು ಪರೋಕ್ಷವಾಗಿ ಬಿಜೆಪಿ ಪಕ್ಷ ರಾಜಕೀಯ ಕಾರಣಕ್ಕಾಗಿ ಅಂತಿಮ ಪಂದ್ಯವನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವಂತೆ ನೋಡಿಕೊಂಡಿದೆ ಎಂದು ಅಖಿಲೇಶ್ ಯಾದವ್ ಆರೋಪ ಮಾಡಿದ್ದಾರೆ.