ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಬಹುಮತ ಪಡೆದು ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾದ ದೇಶದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಈ ಬಾರಿ ಪಾತ್ರರಾಗಲಿದ್ದು, ಜೂನ್ 8ರಂದು ರಾತ್ರಿ 8 ಗಂಟೆಗೆ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾದ ಹಲವಾರು ಪ್ರಮುಖ ನಾಯಕರು ಸೇರಿದಂತೆ ವಿದೇಶಿ ಗಣ್ಯರು ಸಹ ಭಾಗಿಯಾಗಲಿದ್ದಾರೆ. ಈ ಪೈಕಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವುವುದು ಖಚಿತವಾಗಿದೆ.
ಪ್ರಧಾನಿ ಹಸೀನಾ ಮತ್ತು ದಹಲ್ ಇಬ್ಬರೂ ಈ ಹಿಂದೆ 18 ನೇ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದರು.
ಶ್ರೀಲಂಕಾದ ಅಧ್ಯಕ್ಷ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ , ಭೂತಾನ್ ರಾಜ ಕೂಡಾ ಭಾಗವಹಿಸುವ ಸಾಧ್ಯತೆ ಇದೆ.