ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮಹಾಘಟಬಂಧನದ ನಾಯಕರು ಒಟ್ಟಾಗಿ ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದರು. ಮಣಿಪುರದಲ್ಲಿನ ಹಿಂಸಾಚಾರ ಎಲ್ಲೆ ಮೀರಿದ್ದು, ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಲಭೆ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ಬಗ್ಗೆ ಉಭಯ ಸದನಗಳಲ್ಲಿ ಚರ್ಚೆಯಾಗಬೇಕು ಅಂತಾ ಪಟ್ಟು ಹಿಡಿದರು. ಈ ವೇಳೆ ಆಡಳಿತರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ನಡುವೆ ಕೆಲಕಾಲ ಗದ್ದಲ ಏರ್ಪಟ್ಟಿತು. ಇತ್ತ, ರಾಜ್ಯಸಭೆಯಲ್ಲೂ ಮಣಿಪುರದ ಹಿಂಸಾಚಾರವೇ ಪ್ರತಿಧ್ವನಿಸಿದ್ದು, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಣಿಪುರ ಬಗ್ಗೆ ನಿಯಮ 267 ರ ಅಡಿಯಲ್ಲಿ ವಿಸ್ತೃತ ಚರ್ಚೆಯಾಗಬೇಕೆಂದು ಒತ್ತಾಯಿಸಿದರು. ಪ್ರಧಾನಿ ಇದಕ್ಕೆ ಉತ್ತರ ನೀಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಖರ್ಗೆಯವರ ವಾದಕ್ಕೆ ಇತರ ಪ್ರತಿಪಕ್ಷಗಳು ಧ್ವನಿಗೂಡಿಸಿದವು. ಈ ವೇಳೆ ಬಿಜೆಪಿ ಮತ್ತು I.N.D.I.A. ಗಳ ಮಧ್ಯೆ ವಾಕ್ಸಮರವೇ ನಡೆಯಿತು. ಪ್ರಧಾನಿ ಮೋದಿ ಸದನದ ಹೊರಗೆ ಸುದ್ದಿಗೋಷ್ಟಿಯಲ್ಲಿ ಹೇಳಿದರೆ ಮುಗಿಯಲ್ಲ. ಬದಲಾಗಿ ಸದನದ ಒಳಗೂ ಮಣಿಪುರದ ವಿಷಯವಾಗಿ ವಿವರ ಒದಗಿಸಬೇಕು ಎಂದರು. ಮಣಿಪುರದಲ್ಲಿ ಇಡಿ ದೇಶವೇ ತಲೆ ತಗ್ಗಿಸುವ ಹಾಗೆ ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಅಮಾನವೀಯವಾಗಿ ಮೆರವಣಿಗೆ ನಡೆಸಿ ಅತ್ಯಾಚಾರ ಮಾಡಲಾಗಿದೆ. ಇದನ್ನೆಲ್ಲ ಪ್ರಶ್ನಿಸಿದ ಆ ಹೆಣ್ಣುಮಕ್ಕಳ ತಂದೆ, ಸಹೋದರರನ್ನು ಅಮಾನುಷ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಇದೆಲ್ಲವೂ ಅಲ್ಲಿನ ಪೊಲೀಸರ ಕಣ್ಣೆದುರಲ್ಲೇ ನಡೆದಿದೆ ಅಂತಾ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.