ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಸಿದ್ಧತೆ ದೃಷ್ಟಿಯಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಕರ್ನಾಟಕ ಕಾಂಗ್ರೆಸ್ ನಾಯಕರ ಜತೆ ದೆಹಲಿಯಲ್ಲಿ ಮೊದಲ ಹಂತದ ಸಭೆಯನ್ನು ಬುಧವಾರ ನಡೆಸಿತು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಂಸದ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ, 2024ರ ಲೋಕಸಭೆ ಚುನಾವಣೆ ಗೆಲ್ಲುವುದಕ್ಕಾಗಿ ಸೂತ್ರವೊಂದನ್ನು ಎಐಸಿಸಿ ಪಕ್ಷದ ನಾಯಕರ ಮುಂದಿಟ್ಟಿದೆ.
5 ಉಚಿತ ಗ್ಯಾರಂಟಿಗಳು ಸರಿಯಾಗಿ ಜಾರಿಯಾಗಬೇಕು. ಅದಕ್ಕಾಗಿ ಫಲಾನುಭವಿಗಳ ಸಭೆ ನಡೆಸಬೇಕು. ಫಲಾನುಭವಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಸಂಪರ್ಕ ಮಾಡಬೇಕು. ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ತಡವಾಗಬಾರದು. ಸೂಕ್ತವಾದ ಅಭ್ಯರ್ಥಿಗಳನ್ನು ಗುರುತಿಸಿ ಆದಷ್ಟು ಬೇಗ ಅಖಾಡಕ್ಕೆ ಬಿಡಬೇಕು. ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಕಾರ್ಯಕ್ರಮ ರೂಪಿಸಬೇಕು. ಬಿಜೆಪಿಯ ಹಿಂದೂ ಮುಸ್ಲಿಂ ವಿಭಜನೆ ತಂತ್ರಕ್ಕೆ ಪ್ರತಿತಂತ್ರ ರೂಪಿಸಬೇಕು. ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರ ಗೆಲ್ಲುವ ಗುರಿಯೊಂದಿಗೆ ಹೋರಾಡಬೇಕು ಎಂದು ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕರಿಗೆ ಎಐಸಿಸಿ ನಾಯಕರು ಸೂಚನೆ ನೀಡಿದ್ದಾರೆ.