ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ನವ ಕಾನೂನು ಪದವೀಧರರಿಗೆ ಪ್ರತಿ ಮಾಹೆಯಾನ ರೂ.2,000/- ಪ್ರೋತ್ಸಾಹ ಧನ ನೀಡುವ ಸಂಬಂಧವಾಗಿ ಸರ್ಕಾರದ ಕಾನೂನು ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಲು ಕೋರಿದ್ದು, ಅದರಂತೆ ಜಿಲ್ಲೆಯ ಅರ್ಹ ನವ ಕಾನೂನು ಪದವೀಧರರಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 2024ರ ಜನವರಿ 12 ಅರ್ಜಿ ಸಲ್ಲಿಸಲು ಕೊನೆಯ ದಿನ.
ಅರ್ಜಿಗಳನ್ನು ಡಿಸೆಂಬರ್ 13 ರಿಂದ ಸಲ್ಲಿಸಬಹುದಾಗಿದ್ದು, ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸತಕ್ಕದ್ದು. ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಅರ್ಹ ಅಭ್ಯರ್ಥಿಗಳು ನೇರವಾಗಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಚಿತ್ರದುರ್ಗ ಜಿಲ್ಲೆಯ ಇತರೆ ಎಲ್ಲಾ ತಾಲ್ಲೂಕುಗಳ ವ್ಯಾಪ್ತಿಯ ಅರ್ಹ ಅಭ್ಯರ್ಥಿಗಳು ಆಯಾ ತಾಲ್ಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶರ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯ ಅರ್ಹ ಅಭ್ಯರ್ಥಿಗಳು ಅಲ್ಲಿಯ ಸಿವಿಲ್ ನ್ಯಾಯಾಧೀಶರ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಹತೆಗಳು: ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಡಿಯಲ್ಲಿ ದಿನಾಂಕ:01-06-2022 ರಿಂದ 31-05-2023 ರವರೆಗಿನ ಅವಧಿಯಲ್ಲಿ ವಕೀಲರ ವೃತ್ತಿಗೆ ನೊಂದಾಯಿಸಿಕೊಂಡಿರತಕ್ಕದ್ದು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ವರಮಾನದ ಮಿತಿಯು ರೂ.40,000/-ಗಳನ್ನು ಮೀರತಕ್ಕದ್ದಲ್ಲ (ಆದಾಯ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು), ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಯೋ ನಿವೃತ್ತಿ, ಕಡ್ಡಾಯ ನಿವೃತ್ತಿ ಮತ್ತು ಸ್ವ-ಇಚ್ಚಾ ನಿವೃತ್ತಿ ಹೊಂದಿದ ನಂತರ ವಕೀಲ ವೃತ್ತಿ ನಡೆಸಲು ಇಚ್ಚಿಸುವ ಕಾನೂನು ಪದವೀಧರರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಅಂತಹ ಯಾವುದೇ ಸೇವೆಯಿಂದ ತೆಗೆದು ಹಾಕಲ್ಟಟ್ಟ ಕಾನೂನು ಪದವೀಧರರಿಗೆ ಸಹ ಅನ್ವಯವಾಗುವುದಿಲ್ಲ. ಇಂತಹದೇ ಸೌಲಭ್ಯವನ್ನು ಈ ಯೋಜನೆ, ಇತರೆ ಯೋಜನೆಯಡಿ ಅಥವಾ ರಾಜ್ಯ ಸರ್ಕಾರದ ಬೇರೆ ಯಾವುದೇ ಇಲಾಖೆಯ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳು ಈ ಯೋಜನೆಯ ಸೌಲಭ್ಯಗಳಿಗೆ ಅರ್ಹರಾಗತಕ್ಕದ್ದಲ್ಲ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯ, ಚಿತ್ರದುರ್ಗ ಮತ್ತು ಜಿಲ್ಲೆಯ ಹಿರಿಯ ಸಿವಿಲ್ ಜಡ್ಜ್ ನ್ಯಾಯಾಲಯಗಳು ಹಾಗೂ ಸಿವಿಲ್ ಜಡ್ಜ್ ನ್ಯಾಯಾಲಯ, ಮೊಳಕಾಲ್ಮುರು ಹಾಗೂ ಜಿಲ್ಲೆಯ ಎಲ್ಲಾ ವಕೀಲರ ಸಂಘಗಳಲ್ಲಿ ಲಭ್ಯವಿರುವ ಮೇಲ್ಕಂಡ ಸರ್ಕಾರಿ ಆದೇಶದ ಪ್ರತಿಗಳಲ್ಲಿರುವ ಮಾರ್ಗಸೂಚಿಗಳನ್ನು ಮತ್ತು ಅರ್ಜಿ ನಮೂನೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಅರ್ಜಿಗಳನ್ನು ಸ್ವೀಕರಿಸುವ ನಿಗದಿತ ದಿನಾಂಕದ ನಂತರ ತಲುಪುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತಿಳಿಸಿದ್ದಾರೆ.