ಅಮೇರಿಕಾ: ಅಮೆರಿಕಾ ದೇಶದ ಅಧ್ಯಕ್ಷನಾಗಿ ಈ ಬಾರಿ ಆಯ್ಕೆಯಾಗದಿದ್ದರೆ ರಕ್ತಪಾತವಾಗುವ ಸಾಧ್ಯತೆಯಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕಾದ ಒಹಿಯೋದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಮುಂದಿನ ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯು ಅಮೆರಿಕಾದ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ. ಅಮೆರಿಕಾದಲ್ಲಿ ಸದ್ಯದ ಅಧ್ಯಕ್ಷ ಜೋ ಬಿಡೆನ್ ಅವರು ಅತ್ಯಂತ ಕೆಟ್ಟ ಆಡಳಿತ ನೀಡುತ್ತಿದ್ದಾರೆ. ಹೀಗಿರುವಾಗ, ಈ ಬಾರಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾನು ಆಯ್ಕೆಯಾಗದಿದ್ದರೆ ದೇಶದಲ್ಲಿ ದೊಡ್ಡ ಮಟ್ಟದ ರಕ್ತಕ್ರಾಂತಿಯಾಗಬಹುದು ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಅವರು ಯಾವ ರೀತಿಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನುವುದು ಸದ್ಯಕ್ಕೆ ಗೊತ್ತಾಗಿಲ್ಲ. ಆದರೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಗೆಲುವಿನ ಕುದುರೆಯಾಗಿ ಮುನ್ನಡೆ ಸಾಧಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರೇ ಈ ರೀತಿಯ ಹೇಳಿಕೆ ನೀಡಿರುವುದು ಸಾಕಷ್ಟು ಚರ್ಚೆ ಹಾಗೂ ರಾಜಕೀಯ ವಿಶ್ಲೇಷಣೆಗೆ ಕಾರಣವಾಗಿದೆ.
ಟ್ರಂಪ್ ಅವರ ಹೇಳಿಕೆಯನ್ನು ಬಿಡೆನ್ ಪ್ರಚಾರ ವಿಭಾಗವು ತೀವ್ರವಾಗಿ ಖಂಡಿಸಿದೆ. ಟ್ರಂಪ್ ಅಮೆರಿಕಾದ ಇತಿಹಾಸದಲ್ಲಿ ಮತ್ತೊಂದು ಜನವರಿ 6ರ ಹಿಂಸಾ ದಿನವನ್ನು ಸೃಷ್ಟಿಸುವುದಕ್ಕೆ ಹೊರಟಿರುವುದು ಸ್ಪಷ್ಟವಾಗುತ್ತದೆ. ಆದರೆ, ಅಮೆರಿಕಾದ ಜನತೆ ನವೆಂಬರ್ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಲಿದೆ. ಈ ರೀತಿಯ ಹೇಳಿಕೆಗಳು ಟ್ರಂಪ್‌ಗೆ ಹಿಂಸೆ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದೆ.
ಇನ್ನುಂದೆಡೆ ಟ್ರಂಪ್,” ತಾವು ಮರು ಆಯ್ಕೆಯಾದರೆ ಚೀನಾವು ಅಮೆರಿಕಾದಿಂದ ಆಮದು ಮಾಡಿಕೊಳ್ಳುವ ಯಾವುದೇ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ದೇಶಕ್ಕೆ ನನ್ನ ಅವಶ್ಯಕತೆ ಇದೆ. ನಾನು ಗೆಲ್ಲದಿದ್ದರೆ ಕಳೆದ ಬಾರಿಗಿಂತ ಈ ಸಲ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂದಿದ್ದಾರೆ. ರಿಪಬ್ಲಿಕ್ ಅಭ್ಯರ್ಥಿಯಾಗಿ ತಮ್ಮ ಆಯ್ಕೆ ಬಹುತೇಕ ಖಚಿತಗೊಂಡ ಬಳಿಕ ಟ್ರಂಪ್ ಈ ಹೇಳಿಕೆ ನೀಡಿರುವುದು ಗಮನಾರ್ಹ.