ಪಿತಾಪುರಂ: ನಾನು ಆಂಧ್ರಪ್ರದೇಶದ ಗೃಹ ಮಂತ್ರಿ ಆಗಿದ್ದರೆ “ಪರಿಸ್ಥಿತಿ ಭಿನ್ನವಾಗಿರುತ್ತಿತ್ತು” ಎಂದಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಂಧ್ರದ ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಗೃಹ ಸಚಿವೆ ವಂಗಲಪುಡಿ ಅನಿತಾ ಅವರನ್ನು ನೇರವಾಗಿಯೇ ಟೀಕಿಸಿದ್ದಾರೆ. ಪಿತಾಪುರಂ ಕ್ಷೇತ್ರದ ಗೊಲ್ಲಪ್ರೋಲುದಲ್ಲಿ ಸೋಮವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಲ್ಯಾಣ್, ಸಾರ್ವಜನಿಕರ ನಿರೀಕ್ಷೆಗಳನ್ನು ಈಡೇರಿಸುವಂತೆ ಅನಿತಾ ಅವರಿಗೆ ಕೇಳಿಕೊಂಡರು. ಇದೇ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಕಾನೂನು ಮತ್ತು ಸುವ್ಯವಸ್ಥೆಯ ಮಾದರಿಯನ್ನು ಉಲ್ಲೇಖಿಸಿದ ಪವನ್ ಕಲ್ಯಾಣ್, “ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರಂತೆಯೇ ಈ ಅಪರಾಧಿಗಳನ್ನು ಶಿಕ್ಷಿಸಬೇಕು. ಅಲ್ಲಿಯವರೆಗೆ ಅವರು ಮಾತು ಕೇಳುವುದಿಲ್ಲ. ನೀವು ನಮ್ಮನ್ನು ಆ ರೀತಿಯ ಪರಿಸ್ಥಿತಿಗೆ ತಳ್ಳುತ್ತಿದ್ದೀರಿ” ಎಂದು ಹೇಳಿದರು.