ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಗ್ಯಾಂಗ್ ವಚನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿ ಬಳಿಕ ಒಡಿಶಾದಲ್ಲಿ ಮಾರುವೇಷದಲ್ಲಿ ತಲೆಮರೆಸಿಕೊಂಡಿದ್ದ ಹಾಲಶ್ರೀ ಸ್ವಾಮಿ ಬಂಧನದ ಬಳಿಕ ನ್ಯಾಯಾಲಯದಲ್ಲಿ ಇಂದು ಹೊಸ ಡ್ರಾಮಾ ಮಾಡಿದ್ದಾನೆ.
ಗೋವಿಂದ ಬಾಬು ಪೂಜಾರಿಗೆ (Govinda Babu Poojary) ನಾನು ಈಗಾಗಲೇ 50 ಲಕ್ಷ ಕೊಟ್ಟಿದ್ದು, ಉಳಿದ ಹಣವನ್ನೂ ವಾಪಸ್ ಮಾಡ್ತೀನಿ ಎಂದು ಹೇಳಿದ್ದಾನೆ. ಗೋವಿಂದಬಾಬುರನ್ನು ಪರಿಚಯ ಮಾಡಿಸಿದವರು ನನಗೆ ಹಣ ಕೊಟ್ಟಿದ್ದಾರೆ. ಟಿಕೆಟ್ ಕೊಡಿಸ್ತೀನಿ ಅಂತ ನಾನು ಹಣ ಪಡೆದಿಲ್ಲ. ನನಗೆ ಕೊಟ್ಟಿರೋ ಹಣ ವಾಪಸ್ ಕೊಟ್ಟು ಬಿಡ್ತೀನಿ ಎಂದು ವಿಚಾರಣೆ ವೇಳೆ ನಾಟಕ ಶುರುಮಾಡಿದ್ದಾನೆ.
ಈಗಾಗಲೇ 50 ಲಕ್ಷ ಹಣವನ್ನು ಗೋವಿಂದ ಬಾಬು ಅವರಿಗೆ ವಾಪಸ್ ಕೊಟ್ಟಿದ್ದೀನಿ. ದೂರು ಕೊಡುವ ಹಿಂದಿನ ದಿನವೂ ಹಣ ಕೊಡ್ತೀನಿ ಅಂತ ಹೇಳಿದ್ದೆ. ನನ್ನ ಹಣಕ್ಕೆ ಮಾತ್ರ ನಾನು ಜವಾಬ್ದಾರಿ, ಬೇರೆಯವರ ಹಣ ಗೊತ್ತಿಲ್ಲ. ಟಿಕೆಟ್ (BJP Ticekt) ವಿಚಾರವೂ ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನವನ್ನು ಹಾಲಶ್ರೀ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಲಶ್ರೀಯನ್ನು ನಿನ್ನೆ ರೈಲ್ವೆ ಪೊಲೀಸರ ನೆರವಿನಿಂದ ಬಂಧಿಸಿ ಬೆಂಗಳೂರಿಗೆ ವಾಪಸ್ ಕರೆತರಲಾಗಿತ್ತು. ಸಿಸಿಬಿ ಪೊಲೀಸರು (CCB Police) ಇಂದು 19ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಿದ್ದರು. ಆರೋಪಿಯನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಸಿಸಿಬಿ, ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ವೇಳೆ ಹಾಲಶ್ರೀ ಪರ ವಕೀಲ ಅರುಣ್ ಶ್ಯಾಂ ಕೂಡ ಹಾಜರಿದ್ದರು.
ಪೊಲೀಸ್ ಕಸ್ಟಡಿಗೆ ಆಕ್ಷೇಪ ವ್ಯಕ್ತಪಡಿಸಿ, ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆರೋಪಿಗೆ ಜಾಮೀನು ನೀಡದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲರು ಆಕ್ಷೇಪಿಸಿದರು. ತನಿಖೆ ನಡೆಯುವ ಮಧ್ಯೆ ಜಾಮೀನು ನೀಡಬಾರದು. ಸಾಕ್ಷಿ ನಾಶವಾಗುತ್ತದೆ ಎಂದು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆರೋಪಿಯನ್ನು 10 ದಿನ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.