ಚಿತ್ರದುರ್ಗ: ಹೌದು, ಮಧ್ಯಕರ್ನಾಟಕ ಬಯಲುಸೀಮೆ ಪ್ರದೇಶ ಸಾಂಸ್ಕೃತಿಕ, ಬುಡಕಟ್ಟು ಸಂಸ್ಕೃತಿಯ ತೊಟ್ಟಿಲು. ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಪ್ರತಿ ಊರುಗಳು ವಿಶೇಷತೆಗಳನ್ನು ಹೊಂದಿವೆ.
ಹಬ್ಬ-ಹರಿದಿನ, ಉತ್ಸವಗಳು ಎಲ್ಲವೂ ವಿಶೇಷ. ಅದರಲ್ಲೂ ನಾಯಕನಟ್ಟಿ ತಿಪ್ಪೇರುದ್ರಸ್ವಾಮಿ, ಗೌರಸಂದ್ರಮಾರಮ್ಮ, ವದ್ದೀಕೆರೆ ಸಿದ್ಧೇಶ್ವರ, ಚಿತ್ರದುರ್ಗದ ಅಕ್ಕ-ತಂಗಿ ಭೇಟಿ, ಹಿರಿಯೂರು ತೇರುಮಲ್ಲೇಶ್ವರ, ಹೊಸದುರ್ಗದ ವಜ್ರ, ಹಾಲುರಾಮೇಶ್ವರ ಹೀಗೆ ಬಹಳಷ್ಟು ಊರುಗಳಲ್ಲಿ ಜರುಗುವ ಉತ್ಸವಗಳು ನಾಡಿನ ಗಮನವನ್ನೇ ಸೆಳೆದಿವೆ.
ಅದರಲ್ಲೂ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಎಂದೇ ಖ್ಯಾತಿ ಗಳಿಸಿದೆ. ಈ ಉತ್ಸವದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಹಾಗೂ ಆಂಧ್ರ, ತಮಿಳುನಾಡು ಪ್ರದೇಶದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಹಟ್ಟಿ ತಿಪ್ಪೇಶನ ತೇರು ಎಂದರೇ ಮಧ್ಯಕರ್ನಾಟಕದ ಜನರು ಭಕ್ತಿಯ ಪರಾಕಷ್ಟೇ ತಲುಪುತ್ತಾರೆ. ಇಂತಹ ಉತ್ಸವದಲ್ಲಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಭಕ್ತಿಯೊಂದಿಗೆ ತಳುಕು ಹಾಕಿಕೊಂಡಿದ್ದ ಮುದ್ದಾದ ಗೊಂಬೆಯೊಂದು 10-15 ವರ್ಷದ ಹಿಂದೆ ಕಣ್ಮರೆ ಆಗಿದೆ ಎಂಬುದೇ ಅಚ್ಚರಿ ಜೊತೆಗೆ ನೋವಿನ ಸಂಗತಿ.
ಬಹಳಷ್ಟು ಹಿರಿಯೂರು ಈಗಲೂ ಈ ಗೊಂಬೆಯನ್ನು ನೆನಪಿಸಿಕೊಂಡು, ಮುದ್ದಾದ ಗೊಂಬೆಯನ್ನು ಹುಡುಕಿ ಕೊಡುವಿರಾ ಎಂಬ ರೀತಿ ಅದರ ಮಹತ್ವ, ವಿಶೇಷತೆಯನ್ನು ತಮ್ಮ ನೆನಪಿನ ಬುತ್ತಿಯಿಂದ ಬಿಚ್ಚಿಡುತ್ತಾರೆ.
ಹೌದು, ಈ ಗೊಂಬೆ ಐತಿಹಾಸಿಕ, ಸಾಂಸ್ಕೃತಿಕ ಜಾತ್ರೆಯ ಅಸ್ಮಿತೆ ಆಗಿತ್ತು. ಭಕ್ತರ ಭಕ್ತಿಯೊಂದಿಗೆ ಬೆಸೆದುಕೊಂಡಿತ್ತು. ಪ್ರತಿ ವರ್ಷ ಸಾವಿರಾರು ಗೊಂಬೆಗಳು ಮಾರಾಟವಾಗುತ್ತಿದ್ದವು. ಹಟ್ಟಿ ಜಾತ್ರೆಗೆ ಬಂದ ಬಹುತೇಕರು ಈ ಗೊಂಬೆ ಖರೀದಿಸಿಕೊಂಡು ತಮ್ಮ ಮನೆಯ ದೇವರ ಕೋಣೆ ಅಥವಾ ಕಪಾಟಿನಲ್ಲಿಡುವುದು ಸಂಪ್ರದಾಯವಾಗಿ ಇತ್ತು. ಈ ಗೊಂಬೆಯಿಂದ ಕುಟುಂಬಕ್ಕೆ ಒಳ್ಳೆಯದು ಆಗಲಿದೆ ಎಂಬ ನಂಬಿಕೆ ಅಂದು ದಟ್ಟವಾಗಿತ್ತು.
ಈಗಲೂ ಹಟ್ಟಿ ಜಾತ್ರೆಯಲ್ಲಿ ನೂರಾರು ಅಂಗಡಿ-ಮುಂಗಟ್ಟು ಕಂಡುಬರುತ್ತವೆ. ಆದರೆ, ಈ ಗೊಂಬೆ ಮಾತ್ರ ಕಾಣಬರುವುದಿಲ್ಲ.
ಹಿನ್ನೆಲೆ: ಹಟ್ಟಿ ಜಾತ್ರೆ ಆರಂಭದಿಂದಲೂ ಮುದ್ದಾದ ಗೊಂಬೆ 10-15 ವರ್ಷದ ಹಿಂದಿನವರೆಗೂ ಜಾತ್ರೆಯಲ್ಲಿ ಕಂಡುಬರುತ್ತಿತ್ತು. ಆರಂಭದಲ್ಲಿ ಇದನ್ನು ಸಗಣೆ ಗೊಂಬೆ ಎಂದು ಕರೆಯಲಾಗುತ್ತಿತ್ತು. ಸಾಮಾನ್ಯವಾಗಿ ಸಗಣೆಯಿಂದ ತಯಾರಿಸುತ್ತಿದ್ದ ಕಾರಣಕ್ಕೆ ಹಾಗೇ ಕರೆಯುತ್ತಿದ್ದರು ಎನ್ನಬಹುದು. ಜನಪದರು, ಗ್ರಾಮೀಣರ ಭಾಷೆಯಲ್ಲಿ ಕಿಸಬಾಲಕ್ಕ ಗೊಂಬೆ ಎಂದೇ ಚಿರಪರಿಚಿತ.
ಈ ಗೊಂಬೆ ಕೇವಲ ಆಕರ್ಷಣೆಯ ವಸ್ತುವಷ್ಟೇ ಅಲ್ಲ, ಸಾಂಪ್ರಾದಾಯಿಕ ವಸ್ತು. ಹಟ್ಟಿ ಜಾತ್ರೆಗೆ ಬರುವ ಬಹುತೇಕರು ತಮ್ಮೂರಿಗೆ ಮರುಳುವ ಸಂದರ್ಭ ಈ ಗೊಂಬೆ ತೆಗೆದುಕೊಂಡು ಹೋಗುವುದು ಪದ್ಧತಿ ಆಗಿತ್ತು.
*ವಿಶಿಷ್ಟ ಕುಟುಂಬ: ಹೊರಮಠದ ಪ್ರದೇಶಲ್ಲಿದ್ದ ಕುಶಲಕರ್ಮಿಗಳಾದ ಚಿತ್ರಾಗಾರರ ಕುಟುಂಬದವರು ತಮ್ಮ ಬದುಕನ್ನು ದೇವಸ್ಥಾನ, ಗುಡಿ-ಗುಂಡಾರ ಬಾಗಿಲು ತಯಾರಿಕೆಗೆ ಅರ್ಪಿಸಿಕೊಂಡಿದ್ದರು. ಅದರಲ್ಲಿನ ಒಂದು ಕುಟುಂಬ ತಿಪ್ಪೇರುದ್ರಸ್ವಾಮಿ ದೇವರ ಸೇವೆ ಎಂದೇ ಭಾವಿಸಿ ಈ ಗೊಂಬೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು.
*ತಯಾರಿಕೆ ಹೇಗೆ: ಜಾತ್ರೆ ಆರಂಭಕ್ಕೆ 3 ತಿಂಗಳಿಗೆ ಮುನ್ನವೇ ಈ ಕುಟುಂಬ ಸಾವಿರಾರು ಗೊಂಬೆಗಳ ತಯಾರಿಕೆಗೆ ಸಿದ್ಧತೆ ಕೈಗೊಳ್ಳುತ್ತಿತ್ತು. ಹುಣಸೆ ಬೀಜದ ಪೌಡರ್ ಅನ್ನು ಅಂಟು ಮಾಡಿ, ಅದಕ್ಕೆ ಮರದ ಒಟ್ಟು ಸೇರ್ಪಡೆ ಮಾಡಿ ಗೊಂಬೆ ತಯಾರಿಸುತ್ತಿದ್ದರು. ಗೊಂಬೆ ಗಟ್ಟಿತನಕ್ಕೆ, ಕಾಲು-ಕೈ ಮೂಡಲು ಬಿದರಿನ ಕಡ್ಡಿ ಬಳಸುತ್ತಿದ್ದರು. ಗೊಂಬೆಗೆ ತೆಳು ಹತ್ತಿ ಬಟ್ಟೆಯನ್ನು ಅಂಟಿಸಿ, ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಬಳಿಕ ಅದಕ್ಕೆ ಬಣ್ಣ ಬಳೆದು, ಮೇಲು-ಕೇಳ ಅಂಗಿ ತೊಡಿಸಿ ಸಿದ್ಧಗೊಳಿಸುತ್ತಿದ್ದರು.
ವಿಶೇಷ ಎಂದರೆ ಗೊಂಬೆಗೆ ಸಂಪ್ರಾದಾಯಿಕವಾಗಿ ಒಂದೇ ರೀತಿ ಬಣ್ಣ ಬಳಿಯಲಾಗುತ್ತಿತ್ತು. ನೂರು ವರ್ಷದಲ್ಲಿ ಯಾವುದೇ ವರ್ಷದ ಗೊಂಬೆ ಕಂಡಾಕ್ಷಣ ಇದು ಹಟ್ಟಿ ಜಾತ್ರೆಯ ಗೊಂಬೆ ಎಂದು ಗುರುತಿಸುವಷ್ಟು ರೀತಿ ತಯಾರಿಸಲಾಗುತ್ತಿತ್ತು.
ಹಿರಿಯೂರು ಹೇಳುವಂತೆ ಅವರ ಕಾಲದಲ್ಲಿ ಒಂದು ಆಣೆಗೆ ಮಾರಾಟವಾಗುತ್ತಿದ್ದ ಗೊಂಬೆ, ಕಳೆದ ಹತ್ತು ವರ್ಷದ ಹಿಂದೆ 15 ರೂಪಾಯಿಗೆ ಖರೀದಿಸುತ್ತಿದ್ದೇವು.
ಕೊನೆಯ ತಲೆಮಾರಿನ ಚಿತ್ರಗಾರ ಕುಟುಂಬ ಸುಶೀಲಮ್ಮ, ರಾಮಣ್ಣ ವೃದ್ಧ ದಂಪತಿಯವರ ಅಗಲಿಕೆ ಜೊತೆಗೆ ಈ ಗೊಂಬೆಯೂ ಕಣ್ಮರೆ ಆಯಿತು ಎಂಬುದು ನೋವಿನ ಸಂಗತಿ. ದೇವರ ಸೇವೆ ಎಂದೇ ಭಾವಿಸಿ ಗೊಂಬೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಈ ಕುಟುಂಬದಲ್ಲಿನ ಯುವ ಪೀಳಿಗೆ, ಆಧುನೀಕತೆಯತ್ತ ಚಿತ್ತ ರಹಿಸಿ, ವಿದ್ಯಾವಂತರಾಗಿದ್ದ ಕಾರಣವೋ ಅಥವಾ ಲಾಭದಾಯಕವಲ್ಲವೆಂಬ ಕಾರಣವೋ ಒಟ್ಟಿನಲ್ಲಿ ಆ ಕುಟುಂಬ ಈ ಗೊಂಬೆ ತಯಾರಿಕೆಯನ್ನು ನಿಲ್ಲಿಸಿರಬಹುದು ಎನ್ನಿಸುತ್ತದೆ.
ಹತ್ತು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕಣ್ಮರೆ ಆಗಿರುವ ಈ ಗೊಂಬೆ ಜಾತ್ರೆಯಲ್ಲಿ ನೂರಾರು ಅಂಗಡಿ-ಮುಂಗಟ್ಟುಗಳಲ್ಲಿ ಹುಡುಕಿದರೂ ಸಿಗುವುದಿಲ್ಲ. ನೋಡಲೇಬೇಕೆಂದರೆ ಹಳ್ಳಿಗಳಲ್ಲಿ ಶ್ರೀಗುರು ತಿಪ್ಪೇಸ್ವಾಮಿ ಭಕ್ತರ ಮನೆಗಳ ದೇವರ ಕೋಣೆಯಲ್ಲಿ ಈಗಲೂ ಕಾಣಬಹುದು.
ಅಂದು ಈ ಗೊಂಬೆಯ ಮೌಲ್ಯಮಾಪನ ಮಾಧ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜನಪದ ಅಕಾಡೆಮಿ ಗುರುತಿಸಿ ಮಾಡಿದ್ದರೇ ಚನ್ನಪಟ್ಟಣದ ಗೊಂಬೆಯಷ್ಟೇ ಖ್ಯಾತಿ ಗಳಿಸಿ ಉತ್ತಮ ಮಾರುಕಟ್ಟೆ ಪಡೆದುಕೊಳ್ಳುತ್ತಿತ್ತು ಎಂಬುದು ಮಾತ್ರ ಸತ್ಯ.
ಈ ವಿಷಯದಲ್ಲಿ ಮಾಧ್ಯಮಗಳು ಸೋಲು ಕಂಡಿವೆ. ಅದರ ಫಲ ಐತಿಹಾಸಿಕ ಜಾತ್ರೆಯ ಅಸ್ಮಿತೆಯಾಗಿದ್ದ ಮುದ್ದಾದ ಗೊಂಬೆ ಕಣ್ಮರೆ ಆಗಿದೆ ಎಂಬ ನೋವು ಮಾತ್ರ ಈಗಲೂ ಹಿರಿಯರ ಮನದಲ್ಲಿ ಬೇರೂರಿದೆ. ಮಾಧ್ಯಮಗಳು, ಬುದ್ಧಿವಂತರು, ಅಕ್ಷವಂತರು ಇಂತಹ ಪೂರ್ವಜನರ ಆಚರಣೆಗಳನ್ನು ವ್ಯಾಪಾರ ಕಣ್ಣಿನಿಂದ ನೋಡದೆ ಭಾವನಾತ್ಮಕ ಹಾಗೂ ಕಲೆಯ ನೋಟದಲ್ಲಿ ಕಾಣುವ ತುರ್ತು ಇದೆ. ಆಗ ಮಾತ್ರ ಬಹುತ್ವ, ಬಹುಸಂಸ್ಕೃತಿಯ ಭಾರತ ವಿಶ್ವದಲ್ಲಿ ವಿಜೃಂಭಿಸಲಿದೆ.
-ಚಳ್ಳಕೆರೆ ಯರ‌್ರಿಸ್ವಾಮಿ