ಬೆಂಗಳೂರು: ದಿನಾಂಕ 7ನೇ ನವೆಂಬರ್, 2024 ರಿಂದ ಬೆಳಿಗ್ಗೆ 05.00 ಗಂಟೆಗೆ ಮಾದಾವರದಿಂದ ಮೊದಲ ವಾಣಿಜ್ಯ ಸೇವೆ ಪ್ರಾರಂಭವಾಗಲಿದ್ದು, ಹಾಗೂ ದಿನದ ಕೊನೆಯ ರೈಲು ರಾತ್ರಿ 11.00 ಗಂಟೆಗೆ ಹೋರಾಡಲಿದೆ. ಕನಿಷ್ಠ ದರ ರೂ 10.00 ಮತ್ತು ಗರಿಷ್ಠ ದರ ರೂ 60. ಇರಲಿದೆ.
ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಂಸದರಾದಂತ ತೇಜಸ್ವಿ ಸೂರ್ಯ, ಶಾಸಕರು ಹಾಗೂ ಇತರ ಗಣ್ಯರು ಯಶವಂತಪುರದಿಂದ ಮಾದಾವರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು ಮತ್ತು ನಾಗವಾರದಿಂದ ಮಾದಾವರ (BIEC) ವರೆಗಿನ ಮೂರು ನಿಲ್ದಾಣಗಳ 3.14 ಕಿ.ಮೀ ರೀಚ್-3 ವಿಸ್ತರಣೆ ಮಾರ್ಗವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ನಾಳೆಯಿಂದ ಈ ವಿಸ್ತರಣಾ ಮಾರ್ಗವನ್ನು ತೆರೆಯಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಔಪಚಾರಿಕ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.
10 ನಿಮಿಷಗಳ ಅವಧಿಯಲ್ಲಿ ರೈಲುಗಳ ಸಂಚಾರವು ಈ ಮಾರ್ಗದಲ್ಲಿ (ಮಾದಾವರ ಮತ್ತು ನಾಗಸಂದ್ರ) ನಡೆಸಲಾಗುವುದು. ಹಸಿರು ಮಾರ್ಗದ ಇತರ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಎಂದಿನಂತೆ ವೇಳಾಪಟ್ಟಿಯ ಪ್ರಕಾರ ಚಲಿಸುತ್ತದೆ.
				
															
                    
                    
                    
                    

































