ದೆಹಲಿ: ಅರವಿಂದ ಕೇಜ್ರಿವಾಲ್ ಅವರು ನಾಳೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಷೇನಾ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಈ ಹಿನ್ನೆಲೆ ಕೇಜ್ರಿವಾಲ್ ನಾಳೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಆಮ್ ಆದ್ಮ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಮುಂಬರುವ ಚುನಾವಣೆಯಲ್ಲಿ ಜನರು ‘ನಾವು ಪ್ರಾಮಾಣಿಕರು’ ಎಂದು ಹೇಳಿದಾಗ ಮತ್ತೆ ಮುಖ್ಯಮಂತ್ರಿಯಾಗಿ ಅರವಿಂದ ಕೇಜ್ರಿವಾಲ್ ಹಾಗೂ ಉಪಮುಖ್ಯಮಂತ್ರಿಯಾಗಿ ಮನೀಶ್ ಸಿಸೋಡಿಯಾ ಅಧಿಕಾರ ಸ್ವೀಕರಿಸುತ್ತಾರೆ ಎಂದು ಎಎಪಿ ಹೇಳಿದೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರು ಜಾಮೀನು ಪಡೆದು ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದರು. ಎಎಪಿ ಶಾಸಕರ ಸಭೆಯನ್ನು ಇನ್ನು 2 ದಿನಗಳಲ್ಲಿ ನಡೆಸಲಾಗುತ್ತದೆ. ಪಕ್ಷದ ನಾಯಕರೊಬ್ಬರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ ಎಂದು ಕೇಜ್ರಿವಾಲ್ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಜನರು ಪ್ರಾಮಾಣಿಕತೆಯ ಪ್ರಮಾಣ ಪತ್ರವನ್ನು ನೀಡಿದಾಗ ನಾನು ಮತ್ತೆ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತುಕೊಳ್ಳುತ್ತೇನೆ. ಇನ್ನೆರಡು ದಿನದಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಭಾನುವಾರ ಕೇಜ್ರಿವಾಲ್ ಅವರು ತಿಳಿಸಿದ್ದರು.
				
															
                    
                    
                    
                    
































