ನಾಳೆ ಗ್ರಾಮ ದೇವತೆಗಳಾದ ’ಅಕ್ಕ-ತಂಗಿಯರ ಭೇಟಿ ಉತ್ಸವಕ್ಕೆ ಸಕಲ ಸಿದ್ಧತೆ.! ಭೇಟಿಯ ಹಿನ್ನೆಲೆ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಸಹೋದರಿಯರ ನಡುವೆ ಜಗಳ, ಮುನಿಸು ಇರುವುದು ಸಹಜ. ಆದ್ರೆ, ಕೋಟೆನಾಡಿನಲ್ಲಿ ಮಾತ್ರ ಮುನಿದು ಮುಖ ತಿರುಗಿಸುವ ಅಕ್ಕ-ತಂಗಿಯರು ವರ್ಷಕ್ಕೊಮ್ಮೆ ಮಾತ್ರ ಭೇಟಿ ಆಗುವ ಸಂಪ್ರದಾಯವಿದೆ ಆ ಸಹೋದರಿಯರ ಭೇಟಿಗೆ ಸಾವಿರಾರು ಜನ ಸಾಕ್ಷಿ ಆಗುತ್ತಾರೆ ಎಂಬುದು ಮತ್ತೊಂದು ಸೋಜಿಗ.

ಹಾಗಾದ್ರೆ, ಸಾಂಪ್ರದಾಯಿಕ ಅಕ್ಕ-ತಂಗಿ ಭೇಟಿಯ ಉತ್ಸವವಾಗಿದೆ. ಅಕ್ಕ-ತಂಗಿ ಭೇಟಿ ಉತ್ಸವ ದುರ್ಗದ ಪರಂಪರೆಯ ಉತ್ಸವವಾಗಿದೆ. ದುರ್ಗದ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ತವರಿಗೆ ಬಂದು ಅಕ್ಕ-ತಂಗಿ ಭೇಟಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ವಿಶೇಷವಾಗಿದೆ.

ಚಿತ್ರದುರ್ಗ ನಗರದಲ್ಲಿಯೂ ಏಕನಾಥೇಶ್ವರಿ ದೇವಿ, ಉಚ್ಚಂಗ ಯಲ್ಲಮ್ಮ ತಾಯಿ, ಚಾಮುಂಡೇಶ್ವರಿ ದೇವಿ, ಕಣಿವೆ ಮಾರಮ್ಮ ದೇವಿ ಮುಂತಾದ ಹೆಣ್ಣು ದೇವರುಗಳ ಆರಾಧನೆ ಹೆಚ್ಚಾಗಿದೆ.

ಭೇಟಿಯ ಹಿನ್ನೆಲೆ:

ಅಕ್ಕ ತಂಗಿಯರಾದ ತಿಪ್ಪಿನಘಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿಗೂ ಕುತೂಹಲಕಾರಿ ಕಥೆಯೊಂದಿದೆ. ನವದುರ್ಗೆಯರಾದ ಕಾಳಿ, ಉಚ್ಚಂಗೆಮ್ಮ, ತಿಪ್ಪಿನಘಟ್ಟಮ್ಮ, ಬರಗೇರಮ್ಮ, ಚೌಡಮ್ಮ, ಗೌರಸಂದ್ರಮಾರಮ್ಮ, ಕಣಿವೆಮಾರಮ್ಮ, ಕುಕ್ಕಡಮ್ಮ, ಏಕನಾಥೇಶ್ವರಿ ದೇವಿ ಚಿತ್ರದುರ್ಗದ ರಕ್ಷಕ ದೇವತೆಗಳು ಎನ್ನುವ ಪ್ರತೀತಿ ಇದೆ.

ನವದುರ್ಗೆಯರಲ್ಲಿ ತಿಪ್ಪಿನ ಘಟ್ಟಮ್ಮನಿಗೆ ಏಳು ಜನ ಮಕ್ಕಳು. ಈಕೆಯ ಪ್ರೀತಿ ಪಾತ್ರ ಅಕ್ಕ ಬರಗೇರಮ್ಮನಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಂಗಿಯ ಮಕ್ಕಳ ಮೇಲೆ ಅಪಾರ ಮಮತೆ, ಪ್ರೀತಿ- ವಾತ್ಸಲ್ಯವಿತ್ತು. ವಾರಕ್ಕೊಮ್ಮೆ ತಂಗಿ ಮನೆಗೆ ಬಂದು, ಮಕ್ಕಳನ್ನು ಕಂಡು ಅವರ ಜತೆ ಆಟವಾಡುತ್ತಾ ಕಾಲ ಕಳೆದು ಹಿಂತಿರುಗುತ್ತಿದ್ದಳು.

ಅಕ್ಕ-ತಂಗಿಯರ ಮಮತೆ ಪ್ರೀತಿಯನ್ನು ಕಂಡು ಅಸೂಯೆ ಪಟ್ಟ ನವದುರ್ಗೆಯರಲ್ಲಿ ಒಬ್ಬಳು ತಿಪ್ಪಿನಘಟ್ಟಮ್ಮನಿಗೆ, ಬರಗೇರಮ್ಮ ಬಂಜೆ ಆಕೆ ಬಂದು ನಿನ್ನ ಮಕ್ಕಳನ್ನು ಮುಟ್ಟಿದರೆ ಒಳ್ಳೆಯದಾಗುವುದಿಲ್ಲ ಎಂದು ಚಾಡಿ ಹೇಳುತ್ತಾಳೆ. ಇದರಿಂದ ಹೆದರಿದ ತಿಪ್ಪಿನಘಟ್ಟಮ್ಮ ತನ್ನ ಅಕ್ಕ ಮನೆಗೆ ಬಂದಾಗ ತನ್ನ ಮಕ್ಕಳು ಆಕೆಯ ದೃಷ್ಟಿಗೆ ಬೀಳಬಾರದು ಎಂದು ಮಕ್ಕಳನ್ನು ಬಚ್ಚಿಡುತ್ತಾಳೆ. ಇದರಿಂದ ಕೋಪಗೊಂಡ ಅಕ್ಕ ಬರಗೇರಮ್ಮ ಸಿಟ್ಟಿನಲ್ಲಿ ‘ನಿನ್ನ ಮಕ್ಕಳು ಕಲ್ಲಾಗಲಿ’. ಇನ್ನೆಂದೂ ನಿನ್ನ ಮುಖ ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹಿಂತಿರುಗುತ್ತಾಳೆ. ಅಕ್ಕ-ತಂಗಿ ದೂರವಾದ ಪರಿಣಾಮ ಊರಿನ ಜನರ ಉಲ್ಲಾಸ ಕುಗ್ಗುತ್ತದೆ. ಏನಾದರೂ ಮಾಡಿ ಅಕ್ಕ-ತಂಗಿಯರನ್ನು ಪುನ: ಭೇಟಿ ಮಾಡಿಸಬೇಕೆಂದು ನವದುರ್ಗೆಯರಲ್ಲಿ ಹಿರಿಯಳಾದ ಏಕನಾಥೇಶ್ವರಿಗೆ ಮೊರೆ ಹೋಗುತ್ತಾರೆ.

ಏಕನಾಥೇಶ್ವರಿ ಊರಿನ ಒಳಿತಿಗಾಗಿ ಭಕ್ತರ ಸಂತೋಷಕ್ಕಾಗಿ ವರ್ಷಕ್ಕೊಮ್ಮೆಯಾದರೂ ನಿಶ್ಚಿತ ಸ್ಥಳದಲ್ಲಿ ತನ್ನ ಸಮ್ಮುಖದಲ್ಲಿ ಅಕ್ಕ-ತಂಗಿಯರ ಭೇಟಿಯಾಗಬೇಕೆಂದು ಆದೇಶಿಸುತ್ತಾಳೆ. ಹಿರಿ ಅಕ್ಕನ ಅಣತಿಯಂತೆ ಪ್ರತಿ ವರ್ಷ ಅಕ್ಕ-ತಂಗಿಯರು ನಗರದ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರ ಮನೆಗಳಲ್ಲಿ ಎಂಟು ದಿನಗಳ ಕಾಲ ಪೂಜೆ ಸ್ವೀಕರಿಸಿ ಆನಂದದಿಂದ ಭಕ್ತರ ಮೊರೆಗೆ ಮನಸೋತು ಅಪಾರ ಭಕ್ತರ ನಡುವೆ ನಗರದ ದೊಡ್ಡಪೇಟೆಯಲ್ಲಿ ಭೇಟಿಯಾಗುತ್ತಾರೆ. ಈ ಭೇಟಿಯನ್ನು ಬೆಟ್ಟದ ತುದಿಯಲ್ಲಿ ನಿಂತು ಏಕನಾಥೇಶ್ವರಿ ವೀಕ್ಷಿಸುತ್ತಾಳೆಂದು ಪ್ರತೀತಿ ಇದೆ. ಜನಪದ ಹಿನ್ನೆಲೆಯ ಈ ಭೇಟಿ ಉತ್ಸವ ನಗರದ ಸಾಂಸ್ಕೃತಿಕ ಹಬ್ಬವೆನಿಸಿದೆ.

ಭೇಟಿ ಉತ್ಸವಕ್ಕೆ ಸಕಲ ಸಿದ್ಧತೆ

ಚಿತ್ರದುರ್ಗ ನಗರದ ರಾಜಬೀದಿ ದೊಡ್ಡಪೇಟೆಯಲ್ಲಿ ನಾಳೆ ಏ.15 ಕ್ಕೆ ಆಯೋಜಿಸಿರುವ ಅಕ್ಕ ತಂಗಿಯರ ಐತಿಹಾಸಿಕ ಭೇಟಿ ಉತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ಜನಪದ ಸೊಗಡಿನ ಹಿನ್ನೆಲೆ ಹೊಂದಿರುವ ಈ ಭೇಟಿ ಉತ್ಸವ ಪ್ರತಿವರ್ಷ ಶ್ರೀ ಏಕನಾಥೇಶ್ವರಿ ಅಮ್ಮನವರ ಸಿಡಿ ಉತ್ಸವದ ನಂತರ ಮೊದಲ ಮಂಗಳವಾರ ನಡೆಯುವುದು ವಾಡಿಕೆ. ಅದರಂತೆ ಇಂದು ನಡೆಯಲಿರುವ ಭೇಟಿ ಉತ್ಸವಕ್ಕೆ ರಾಜಬೀದಿ ದೊಡ್ಡಪೇಟೆಯಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಿಂದ ರಂಗಯ್ಯನ ಬಾಗಿಲಿನವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರು ಭೇಟಿ ಉತ್ಸವ ವೀಕ್ಷಿಸಲು ಬ್ಯಾರಿಕೇಡ್ ನಿರ್ಮಿಸಲಾಗಿದೆ.

ಭೇಟಿ ಉತ್ಸವ ಸಮಿತಿಯಿಂದ ಉತ್ಸವಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಜತೆಗೆ ಪ್ರತಿ ವರ್ಷದಂತೆ ನಗರಸಭೆಯಿಂದ ಸ್ವಚ್ಛತಾ ಕಾರ್ಯ, ನೀರಿನ ಸೌಕರ್ಯ, ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಮಹೋತ್ಸವ ನಡೆಯುವ ಸ್ಥಳದಲ್ಲಿ ಏ.೧೫ರ ಬೆಳಗ್ಗೆಯಿಂದ ಆಕರ್ಷಕ ಅಲಂಕಾರ ನಡೆಯಲಿದ್ದು, ಭೇಟಿಯಾಗುವ ನಿಗದಿತ ಸ್ಥಳದಲ್ಲಿ ಓಂ ಚಿಹ್ನೆಯ ಆಕಾರದಲ್ಲಿ ನಾನಾ ಪುಷ್ಪಗಳಿಂದ ಹಾಗೂ ಮೇಲ್ಭಾಗದಲ್ಲಿ ಮಿನುಗುವ ವರ್ಣಮಯ ವಸ್ತುಗಳಿಂದ ಸಿಂಗರಿಸಲಾಗಿದೆ.

ಅಕ್ಕ-ತಂಗಿಯರ ಬೇಟಿಗಾಗಿ ನಗರಸಭೆಯ ಪೌರ ಕಾರ್ಮಿಕರು ಹಗಲು ಇರಳು ಶ್ರಮವನ್ನು ಹಾಕುತ್ತಿದ್ದಾರೆ ಕಳೆದ ಒಂದು ವಾರದಿಂದಲೇ ಅಕ್ಕ-ತಂಗಿಯರ ಭೇಟಿಯಾಗುವ ಸ್ಥಳವನ್ನು ಸ್ವಚ್ಚ ಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆ ಸ್ಥಳವನ್ನು ಪೂರ್ಣ ಪ್ರಮಾಣದಲ್ಲಿ ಸ್ವಚ್ಚ ಮಾಡಿ ಜನತೆ ಕುಳಿತು ಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಇದರೊಂದಿಗೆ ಭೇಟಿಯ ಸ್ಥಳದಲ್ಲಿ ಸುತ್ತಲೂ ಬ್ಯಾರಿಕೇಟಿಂಗ್ ಮಾಡಿದ್ದು, ಭೇಟಿ ಸಮಯದಲ್ಲಿ ಜನತೆ ಆಗಮಿಸದಂತೆ ವ್ಯವಸ್ಥೆಯನ್ನು ಮಾಡಲಾಗಿದೆ.

 

 

 

 

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon