ಬೆಂಗಳೂರು: ನಾವು ಸುಮ್ಮನಿದ್ದರೂ ಬಿಜೆಪಿ ನಾಯಕರು ಕೆಣಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇನ್ನು ಮುಂದೆ ನಾವು ಸುಮ್ಮನಿರಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ವಿರುದ್ಧ 40% ಭ್ರಷ್ಟಾಚಾರ ಆರೋಪ ಮಾಡಿ ಜಾಹೀರಾತು ಪ್ರಕಟಿಸಿದ್ದ ಪ್ರಕರಣಕ್ಕೆ ಸಂಬಂಧ ಬಿಜೆಪಿ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ವಿಚಾರಣೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್ ಯಾವುದನ್ನೂ ಆಧಾರರಹಿತವಾಗಿ ಹೇಳಿಲ್ಲ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದನ್ನು ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವ್ಯಾವ ಹುದ್ದೆಗೆ ಎಷ್ಟೆಷ್ಟು ಲಂಚ ನೀಡಬೇಕಿತ್ತು ಅಂತ ಪತ್ರಿಕೆಗಳಲ್ಲಿ ವರದಿಯಾದ ಅಂಶಗಳ ಆಧಾರದಲ್ಲೇ ಕಾಂಗ್ರೆಸ್ ಆಗಿನ ಬಿಜೆಪಿ ಸರ್ಕಾರವನ್ನು 40% ಕಮೀಷನ್ ಸರ್ಕಾರ ಎಂದು ಹೇಳಿರುವುದು ಎಂದರು.
ಇನ್ನು ಇವತ್ತಿನ ವಿಚಾರಣೆಯಲ್ಲಿ ರಾಹುಲ್ ಗಾಂಧಿಯವರು ಕೂಡ ಹಾಜರಿರಬೇಕಿತ್ತು. ಆದರೆ ದೆಹಲಿಯಲ್ಲಿ ಇಂದು ಇಂಡಿಯಾ ಮೈತ್ರಿಕೂಟದ ಸಭೆ ಇರುವುದರಿಂದ ವಿಚಾರಣೆಗೆ ಬರಲು ಸಾಧ್ಯವಾಗಲಿಲ್ಲ. ಅವರು ಕಾನೂನನ್ನು ಗೌರವಿಸುವ ವ್ಯಕ್ತಿ, ಮುಂದಿನ ವಿಚಾರಣೆಗೆ ಖಂಡಿತ ಹಾಜರಾಗುತ್ತಾರೆ ಎಂದು ತಿಳಿಸಿದರು