ಬೆಂಗಳೂರು: ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅನುಮತಿ ಪಡೆದುಕೊಳ್ಳದೆ ಖಾಸಗಿ ಬಸ್ ಗಳಲ್ಲಿ ಜನರನ್ನು ಕರೆತರಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಶನಿವಾರ ದೂರು ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಅನುಮತಿ ಪಡೆದುಕೊಳ್ಳದೆ 96 ಬಸ್ ಗಳಲ್ಲಿ ಬ್ಯಾನರ್ ಮತ್ತು ಪಕ್ಷದ ಬಾವುಟ ಹಾಕಿಕೊಂಡು ಬರಲಾಗಿದೆ. ಉಪ ಚುನಾವಣೆಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ರೋಡ್ ಶೋ ನಡೆಸಲು ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ. ಜಯಮತ್ತು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದಿದ್ದರು.
ಆದರೆ, ವಾಹನ ಬಳಕೆಗೆ ಅನುಮತಿ ಪಡೆದುಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಸ್ ಮಾಲೀಕರು ಮತ್ತು ಕಾರ್ಯಕ್ರಮಕ್ಕೆ ಅನುಮತಿ ಪಡೆದಿದ್ದ ಜೆಡಿಎಸ್ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಕೋರ್ಟ್ ಅನುಮತಿ ಪಡೆದು ಎಫ್ಐಆರ್ ದಾಖಲಿಸಿದ್ದಾರೆ.