ಮನೆಯಂಗಳದಲ್ಲಿ ದಿನಾ ಹೂ ನೀಡುವ ಪುಟ್ಟ ಗಿಡ ನಿತ್ಯ ಪುಷ್ಪ ಅಥವಾ ಸದಾ ಪುಷ್ಪ. ದೇವರ ಪೂಜೆಗೆಂದು ಬಳಸುವ ಈ ಗಿಡದ ಹೂವು ಆರೋಗ್ಯವನ್ನು ವೃದ್ಧಿಸಲು ಕೂಡ ಅಷ್ಟೇ ಮಹತ್ವವನ್ನು ಪಡೆದುಕೊಂಡಿದೆ.
ಆಯುರ್ವೇದದಲ್ಲಿಯೂ ಈ ನಿತ್ಯ ಪುಷ್ಪದ ಗಿಡದ ಬಳಕೆಯನ್ನು ಉಲ್ಲೇಖಿಸಲಾಗುತ್ತದೆ. ತಿಳಿ ಗುಲಾಬಿ, ಬಿಳಿಯ ಬಣ್ಣದಲ್ಲಿ ಅರಳುತ್ತದೆ ಈ ಹೂವು . ಇದನ್ನು ಬೆಳೆಯಲು ಹೆಚ್ಚು ನೀರಿನ ಅಗತ್ಯ ಇರುವುದಿಲ್ಲ. ಹೀಗಾಗಿ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯಬಹುದು. ಎಲೆಗಳಲ್ಲಿ ವಿನ್ ಕ್ರಿಸ್ಟಿನ್, ವಿನ್ ಬ್ಲಾಸ್ಟಿನ್ ಹಾಗೂ ಬೇರಿನಲ್ಲಿ ರೆಸರ್ಪಿನ್, ಸರ್ಪೆಂಟೈನ್, ಆಜಮ್ಯಾಲಿಸಿನ್ ಎಂಬ ಔಷಧೀಯ ಸಂಯುಕ್ತ ವಸ್ತುಗಳಿರುತ್ತವೆ.
ಈ ಸಸ್ಯದ ಹೂವು, ಎಲೆ, ಕಾಂಡ ಮತ್ತು ಬೇರುಗಳು ಔಷಧಿ ತಯಾರಿಕೆಯಲ್ಲಿ ಬಹು ಉಪಯುಕ್ತ. ಎಲೆಗಳ ರಸವನ್ನು ಗಾಯಕ್ಕೆ, ಕೀಟದ ಕಡಿತದಲ್ಲಿ, ಅಲರ್ಜಿ ಮತ್ತು ಸೋಂಕು ನಿವಾರಿಸಲು ಬಳಸುತ್ತಾರೆ. ಎಲೆ, ಹೂವುಗಳ ರಸದಲ್ಲಿರುವ ಕಿಣ್ವಗಳಿಂದಾಗಿ ಗಾಯ ಬೇಗ ಮಾಗುತ್ತವೆ. ಸಕ್ಕರೆ ಕಾಯಿಲೆ ತೊಂದರೆಯಿದ್ದಲ್ಲಿ 4-5 ಎಲೆಗಳನ್ನು ವೈದ್ಯರ ಸಲಹೆ ಮೇರೆಗೆ ಬಳಸಬಹುದು.
ದದ್ದು ಮುಂತಾದ ಚರ್ಮ ರೋಗ ನಿವಾರಣೆಗಾಗಿ ಬೇರನ್ನು ನೀರಿನಲ್ಲಿ ತೇದು ಹಚ್ಚಿದರೆ ವಾಸಿಯಾಗುವುದು ಕ್ಯಾನ್ಸರ್ ಜೀವಕೋಶಗಳ ವಿರುದ್ಧ ಹೋರಾಡಲು ನಿತ್ಯ ಪುಷ್ಪದ ಬೇರನ್ನು ಬಳಕೆ ಮಾಡಲಾಗುತ್ತದೆ. ನಿತ್ಯ ಪುಷ್ಪದಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ.