ಕೋಯಿಕ್ಕೋಡ್: ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಮೆದುಳಿಗೆ ಹಾನಿಯುಂಟು ಮಾಡುವ ನಿಪಾ ವೈರಸ್ ಇಬ್ಬರನ್ನು ಬಲಿ ತೆಗೆದುಕೊಂಡ ನಂತರ ಕೇರಳ ಸರ್ಕಾರ ನಿಪಾ ಸೋಂಕು ಹರಡುವುದನ್ನು ತಡೆಗಟ್ಟುವ ಕ್ರಮಗಳನ್ನು ಬಲಪಡಿಸಿದೆ. ರೋಗದ ಗಂಭೀರ ಸ್ವರೂಪವನ್ನು ಪರಿಗಣಿಸಿ, ಜಿಲ್ಲಾಡಳಿತವು ಏಳು ಗ್ರಾಮ ಪಂಚಾಯಿತಿಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಿದೆ. ಕೋಯಿಕ್ಕೋಡ್ ಜಿಲ್ಲಾಧಿಕಾರಿ ಎ ಗೀತಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅತಂಚೇರಿ, ಮಾರುತೊಂಕರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲ್ಲ್ಯಪಲ್ಲಿ ಮತ್ತು ಕವಿಲುಂಪಾರ ಪಂಚಾಯಿತಿಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ಆದೇಶದವರೆಗೂ ಈ ಕಂಟೈನ್‌ಮೆಂಟ್ ಝೋನ್‌ಗಳ ಒಳಗೆ ಅಥವಾ ಹೊರಗೆ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.