ಬೆಂಗಳೂರು: ಕೇರಳದಲ್ಲಿ ನಿಫಾ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಕೇರಳದ ಜತೆಗೆ ಗಡಿ ಹಂಚಿಕೊಂಡಿರುವ ರಾಜ್ಯದ ಗಡಿಯಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಾರ್ವಜನಿಕರು ಕೇರಳಕ್ಕೆ ಅನಗತ್ಯ ಪ್ರವಾಸ ಮಾಡಬೇಡಿ ಎಂದು ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿಯೂ ನಿಫಾ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ , ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಸೋಂಕುಪೀಡಿತರ ಚಿಕಿತ್ಸೆಗೆ 2 ಹಾಸಿಗೆ ಹಾಗೂ ಐಸಿಯು ಜೊತೆಗೆ ಶಂಕಿತ ವ್ಯಕ್ತಿಗಳ ಕ್ವಾರಂಟೈನ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
ಮಾತ್ರವಲ್ಲದೇ ಈ ವ್ಯಾಪ್ತಿಯಲ್ಲಿ “ಜ್ವರ ಕೇಂದ್ರ’ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ದೃಢಪಡುವ ಶಂಕಿತ ನಿಫಾ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಇಲಾಖೆಗೆ ನೀಡುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ| ರಣದೀಪ್ ಹೇಳಿದ್ದಾರೆ.