ಕೋಯಿಕ್ಕೋಡ್ : ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 6ಕ್ಕೆ ಏರಿದ್ದು, ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಸೋಂಕಿಗೆ ಒಳಗಾಗಿರುವ 39 ವರ್ಷದ ವ್ಯಕ್ತಿ ಕೋಯಿಕ್ಕೋಡ್ನ ಆಸ್ಪತ್ರೆಯ ನಿಗಾದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿರುವ ಮೂವರಲ್ಲಿ 9 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿದ್ದು ‘ನಿಫಾ ಕೊರೊನಾಗಿಂತ ಸ್ವಲ್ಪ ಭಿನ್ನವಾಗಿದೆ. ಅದು ಅಷ್ಟು ಬೇಗ ಹರಡುವುದಿಲ್ಲ. ಇದು ಹಣ್ಣು ತಿನ್ನುವ ಬಾವಲಿಗಳಿಂದ ಹರಡುತ್ತದೆ. ಕೇಂದ್ರ ಆರೋಗ್ಯ ತಂಡ ಕೇರಳದ ಕೋಝಿಕ್ಕೋಡ್ ತಲುಪಿದೆ. ಈ ತಂಡ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಲಿದೆ. ಕೇರಳದ ಪ್ರದೇಶಗಳಲ್ಲಿ ಜೀನೋಮ್ ಸೀಕ್ವೆನ್ಸಿಂಗ್‌ಗೆ ಸಿದ್ಧತೆ ಸಹ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ ಕೋಯಿಕ್ಕೋಡ್ ಗೆ ಸಂಚಾರಿ ಲ್ಯಾಬ್ ಕಳುಹಿಸಿಕೊಟ್ಟಿದ್ದು, ಇದು ಕ್ಷಿಪ್ರಗತಿಯಲ್ಲಿವೈರಸ್ ದೃಢಪಡಿಸಲು ನೆರವಾಗಲಿದೆ. ಬಿಎಸ್ ಎಲ್ -3 ನೇ ದರ್ಜೆಯ ಲ್ಯಾಬ್ ಹೊಂದಿರುವ ಈ ಲ್ಯಾಬ್ ದಕ್ಷಿಣ ಏಷ್ಯಾದ ಮೊದಲ ಸಂಚಾರಿ ಲ್ಯಾಬ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕೋಯಿಕ್ಕೋಡ್ನಲ್ಲಿ ಸೋಂಕು ಹರಡಿದ ಕಾರಣ, ಜಿಲ್ಲೆಯ ಸುಮಾರು 11 ವಾರ್ಡ್ಗಳನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಜಿಲ್ಲಾಡಳಿತ ಶನಿವಾರ ಸೆಪ್ಟೆಂಬರ್ 16ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.