ಮನೆಯಲ್ಲಿ ಫ್ರಿಡ್ಜ್ ಇದೆ ಎಂದಾದರೆ ತರಕಾರಿಗಳು, ಹಣ್ಣುಗಳು ಹಾಲು, ಮೊಸರು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಇರಿಸಲಾಗುತ್ತದೆ. ನೀವು ಫ್ರಿಡ್ಜ್ ಅನ್ನು ಪದೇ ಪದೇ ಸ್ವಚ್ಛಗೊಳಿಸದೇ ಇದ್ದರೆ, ದೀರ್ಘಕಾಲದವರೆಗೆ ಕೆಲವು ಪದಾರ್ಥಗಳನ್ನು ಇದ್ದಲ್ಲೇ ಇರಲು ಬಿಟ್ಟರೆ ಪ್ರಿಜ್ನಿಂದ ವಾಸನೆ ಬರುತ್ತದೆ. ಸ್ವಚ್ಛಗೊಳಿಸುವ ಮೊದಲು ಫ್ರಿಡ್ಜ್ ಅನ್ನು ಆಫ್ ಮಾಡಿ. ನಂತರ ಸ್ವಚ್ಛಗೊಳಿಸಲು ಪ್ರಾರಂಭಿಸಿ. ಮೊದಲು ಫ್ರಿಡ್ಜ್‌ನಿಂದ ಎಲ್ಲ ಪದಾರ್ಥಗಳನ್ನು ತೆಗೆದುಹಾಕಿ ಮತ್ತು ಪಕ್ಕಕ್ಕೆ ಇರಿಸಿ. ನಂತರ ಎಲ್ಲ ಕಪಾಟನ್ನು ತೆಗೆದುಹಾಕಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ. ನಂತರ ಬೆಚ್ಚಗಿನ ನೀರಿನಿಂದ ಕಪಾಟನ್ನು ತೊಳೆಯಿರಿ. ನಂತರ ಒಣ ಬಟ್ಟೆಯಿಂದ ಕಪಾಟನ್ನು ಸ್ವಚ್ಛವಾಗಿ ಒರೆಸಿ. ಹೀಗೆ ಮಾಡುವುದರಿಂದ ಕಪಾಟಿನಲ್ಲಿರುವ ಎಲ್ಲ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಕಾಫಿ ಬೀಜಗಳನ್ನು ಫ್ರಿಡ್ಜ್ ನ ವಿವಿಧ ಮೂಲೆಗಳಲ್ಲಿ ಬೇಕಿಂಗ್ ಶೀಟ್‌ನಲ್ಲಿ ಹಾಕಿಟ್ಟು, ರಾತ್ರಿಯಿಡೀ ಫ್ರಿಡ್ಜ್ ನಲ್ಲಿ ಇಟ್ಟರೆ ದುರ್ವಾಸನೆಯನ್ನು ಹೀರಿಕೊಳ್ಳುತ್ತದೆ. ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವು ತಣ್ಣಗಾದ ನಂತರ, ಅದನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ ಮತ್ತು ಫ್ರಿಡ್ಜ್ ಒಳಗೆ ಸಿಂಪಡಿಸಿ. ನಂತರ ಒಣ ಬಟ್ಟೆಯಿಂದ ಎಲ್ಲವನ್ನೂ ಒರೆಸಿ. ಅರ್ಧ ಘಂಟೆಯವರೆಗೆ ಫ್ರಿಡ್ಜ್ ಬಾಗಿಲು ತೆರೆದಿಡಿ ಮತ್ತು ಅದರಲ್ಲಿ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿ. ತಿಂಗಳಿಗೆ ಎರಡು ಬಾರಿ ಹೀಗೆ ಫ್ರಿಡ್ಜ್ ಕ್ಲೀನ್ ಮಾಡುವುದರಿಂದ ಕೆಟ್ಟ ವಾಸನೆಯೆಲ್ಲ ಮಾಯವಾಗುತ್ತದೆ ಎನ್ನುತ್ತಾರೆ ತಜ್ಞರು. ಇದರ ಹೊರತಾಗಿ ಕೆಲವು ಸಣ್ಣ- ಪುಟ್ಟ ಸ್ವಚ್ಛತಾ ಕ್ರಮಗಳನ್ನು ಮಾಡುವುದರಿಂದ ವಾಸನೆ ನಿವಾರಿಸಬಹುದು. ಫ್ರಿಡ್ಜ್ ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ಕಿತ್ತಳೆಯನ್ನು ಕೂಡ ಬಳಸಬಹುದು. ಇದಕ್ಕಾಗಿ ಕಿತ್ತಳೆ ರಸವನ್ನು ಹೊರತೆಗೆದು ನೀರಿನಲ್ಲಿ ಬೆರೆಸಿ ಫ್ರಿಡ್ಜ್ ಅನ್ನು ಸ್ವಚ್ಛಗೊಳಿಸಿ. ಇದು ಫ್ರಿಡ್ಜ್‌ನಿಂದ ಎಲ್ಲಾ ಕೆಟ್ಟ ವಾಸನೆಯನ್ನು ತೆಗೆದುಹಾಕುತ್ತದೆ. ಕಿತ್ತಳೆ ಬದಲಿಗೆ ಪುದೀನಾ ಕೂಡ ಬಳಸಬಹುದು. ಇದಲ್ಲದೇ ಫ್ರಿಡ್ಜ್ ಶುಚಿಗೊಳಿಸಿದ ನಂತರ ಕಿತ್ತಳೆ ಹಣ್ಣಿನ ಸಿಪ್ಪೆಯನ್ನೂ ಫ್ರಿಡ್ಜ್ ಒಳಗೆ ಇಡಬಹುದು. ಇದು ಕೂಡ ವಾಸನೆಯನ್ನು ತೆಗೆದುಹಾಕಬಹುದು. ವೈಟ್ ವಿನೆಗರನ್ನು ಫ್ರಿಡ್ಜ್ ನಲ್ಲಿಡುವುದರಿಂದಲೂ ದುರ್ನಾತವು ಕಡಿಮೆಯಾಗುತ್ತದೆ. ನಿಂಬೆ ಹಣ್ಣಿನಲ್ಲಿರುವ ಸಿಟ್ರಸ್ ಆಸಿಡ್ ನಿಮ್ಮ ರೆಫ್ರಿಜರೇಟರ್ ನ ಒಳ ಭಾಗವನ್ನು ತಾಜಾ ಆಗಿರಿಸುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತದೆ. ನೀವು ಕೆಲವು ಹತ್ತಿಯ ಉಂಡೆಗಳನ್ನು ನಿಂಬೆ ಹಣ್ಣಿನ ರಸದಲ್ಲಿ ಅದ್ದಿ ರೆಫ್ರಿಜರೇಟರ್ ನ ಒಳ ಭಾಗವನ್ನು ಒರೆಸಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಗಮನಿಸಿದರೆ, ನಿಮ್ಮ ರೆಫ್ರಿಜರೇಟರ್ ನ ಒಳಗಿನ ಆಹಾರ ಪದಾರ್ಥಗಳ ಕೆಟ್ಟ ವಾಸನೆ ದೂರಾಗಿ ನಿಂಬೆಯ ಸುವಾಸನೆ ಬೀರಲು ಪ್ರಾರಂಭವಾಗುತ್ತದೆ. ಮತ್ತೊಂದು ವಿಧಾನದಲ್ಲಿ ನಿಂಬೆ ಹಣ್ಣಿನ ಹೋಳುಗಳನ್ನು ಫ್ರಿಡ್ಜ್ ನ ಪ್ರತಿ ಸೆಲ್ಫ್ ನಲ್ಲೂ ಅಲ್ಲಲ್ಲಿ ಇಡಬಹುದು. ಇದರಿಂದಲೂ ಸಹ ರೆಫ್ರಿಜರೇಟರ್ ನ ಕೆಟ್ಟ ವಾಸನೆ ದೂರಾಗುತ್ತದೆ.
