ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಭಾನುವಾರ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನರೇಂದ್ರ ಮೋದಿ ಜೊತೆಗೆ ಕನಿಷ್ಠ 30 ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.
ನಿರ್ಮಲಾ ಸೀತಾರಾಮನ್ ಕೂಡ ಸಚಿವ ಸ್ಥಾನ ಪಡೆಯಲಿದ್ದು, ಹಣಕಾಸು ಸಚಿವೆಯಾಗಿ ಮುಂದುವರೆಯಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಲು ಬಿಜೆಪಿ ಬೆಂಬಲಿಗರಿಂದಲೇ ವಿರೋಧ ವ್ಯಕ್ತವಾಗುತ್ತಿದೆ.
ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ತೆರಿಗೆ, ಬೆಲೆ ಏರಿಕೆ, ಜನರ ಕೋಪಕ್ಕೆ ಕಾರಣವಾಗಿದೆ. ಹಲವು ಕಾರಣಗಳಿಂದ ಬಿಜೆಪಿ ಈ ಬಾರಿ ಬಹುಮತ ಕಳೆದುಕೊಂಡಿದ್ದು, ಮಿತ್ರ ಪಕ್ಷಗಳ ಬೆಂಬಲದಿಂದ ಸರ್ಕಾರ ರಚನೆ ಮಾಡುತ್ತಿದೆ.
ವಿರೋಧ ಏಕೆ?
ನಿರ್ಮಲಾ ಸೀತಾರಾಮನ್ ನೀಡುತ್ತಿದ್ದ ಹೇಳಿಕೆಗಳು ದೇಶದ ಮಧ್ಯಮ ವರ್ಗದ ಜನರನ್ನು ಕೆರಳಿಸಿವೆ. ಬೆಲೆ ಏರಿಕೆ ಬಗ್ಗೆ ಮಾಧ್ಯಮಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಹಲವು ಬಾರಿ ಉದ್ಧಟತನದಿಂದ ಉತ್ತರ ನೀಡುತ್ತಿದ್ದರು.
ಕರ್ನಾಟಕದ ವಿಚಾರಕ್ಕೆ ಬಂದರೆ ಸ್ವತಃ ಹಣಕಾಸು ಸಚಿವೆಯೇ ಬರಪರಿಹಾರ ಬಿಡುಗಡೆ ವಿಚಾರದಲ್ಲಿ ಸುಳ್ಳು ಹೇಳಿ ಬಳಿಕ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದರು.
ಬಿಜೆಪಿಗೆ ಹಿನ್ನಡೆಯಾಗಲು ನಿರ್ಮಲಾ ಕೂಡ ಕಾರಣ!
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ನಿರ್ಮಲಾ ಸೀತಾರಾಮನ್ ಕೂಡ ಕಾರಣ ಎಂದು ಬಿಜೆಪಿ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ. ಕೆಲಸ ಮಾಡುವ ಮಧ್ಯಮ ವರ್ಗವನ್ನು ಕಡೆಗಣಿಸಿದ್ದೇ ಈ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು ಎನ್ನುವ ವಾದ ಕೂಡ ಇದೆ.
ಈರುಳ್ಳಿ ಬೆಲೆ ಗಗನಕ್ಕೇರಿದ್ದಾಗ ನಾನು ಈರುಳ್ಳಿ ತಿನ್ನುವುದಿಲ್ಲ ಎನ್ನುವಂತಹ ಬಾಲಿಶ ಹೇಳಿಕೆಗಳನ್ನು ನೀಡಿ ಜನರ ಸಿಟ್ಟಿಗೆ ತುತ್ತಾಗಿದ್ದರು. ಕರ್ನಾಟಕ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಹೇಳಿ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಕೂಡ ಹಾಕಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಮಾತ್ರ ಜನರ ಕಷ್ಟವನ್ನು, ದುಡಿಯುವ ವರ್ಗದ ಸಿಟ್ಟನ್ನು ಅರ್ಥ ಮಾಡಿಕೊಳ್ಳಲಿಲ್ಲ ಎಂದು ಸ್ವತಃ ಬಿಜೆಪಿ ಬೆಂಬಲಿಗರೇ ಹೇಳುತ್ತಿದ್ದಾರೆ.