ಸಿರಿಗೆರೆ: ನಾನು ಸರ್ಕಾರಿ ನೌಕರನಲ್ಲ. ಸರ್ಕಾರ ನನ್ನನ್ನು ನೇಮಿಸಿಲ್ಲ. 60 ವರ್ಷವಾದ ನಂತರ ನಿವೃತ್ತಿ ಘೋಷಣೆ ಮಾಡಬೇಕು ಎಂದು ಬೈಲಾ ಹೇಳಿಲ್ಲ. ನನಗೆ ಗಡುವು ನೀಡಲು ಅವರು ಯಾರು ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆಯಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು , ರೆಸಾರ್ಟ್‌ನಲ್ಲಿ ನಡೆಸಿದ ಸಭೆಗೆ ನಾನು ಪ್ರಾಮುಖ್ಯ ನೀಡುವುದಿಲ್ಲ. ಅ.18ರಂದು ಪಾದಯಾತ್ರೆಯಲ್ಲಿ ಬಂದರೂ ನಾನು ಅವರನ್ನು ಖಾಸಗಿಯಾಗಿ ಭೇಟಿಯಾಗುವುದಿಲ್ಲ.
ದೊಡ್ಡಗುರುಗಳಾದ ಶಿವಕುಮಾರ ಸ್ವಾಮೀಜಿಗಳ ಮುಂದೆ ಸಮಸ್ಯೆ ಬೆಟ್ಟದಷ್ಟಿತ್ತು. ವೈಯಕ್ತಿಕ ಕಾರಣ ನೀಡಿ ಅವರು 60ನೇ ವಯಸ್ಸಿಗೆ ಪೀಠ ತ್ಯಾಗ ಮಾಡಿದರು. ಆದರೆ ನನ್ನ ಮುಂದೆ ಗುಲಗಂಜಿಯಷ್ಟೂ ಸಮಸ್ಯೆ ಇಲ್ಲ. 1923ರಲ್ಲಿ ಆಗಿರುವ ಬೈಲಾ ಸಾಧು ಸದ್ಧರ್ಮ ವೀರಶೈವ ಸಂಘದ ಬೈಲಾ, ಅದು ಮಠದ ಬೈಲಾ ಅಲ್ಲ’ ಎಂದರು.
1977ರಲ್ಲಿ ದೊಡ್ಡಗುರುಗಳು ಬೈಲಾ ಪರಿಷ್ಕರಣೆ ಮಾಡಿದರು. ಅದರಂತೆ ಪೀಠಾಧಿಪತಿ ಬದಲಾವಣೆಗೆ ಹೆಚ್ಚು ಪ್ರಸರಣವುಳ್ಳ ಕನ್ನಡ ದಿನಪತ್ರಿಕೆಗೆ ಜಾಹೀರಾತು ನೀಡಿ, ಸಂದರ್ಶನ ಮಾಡಿ ಶ್ರೀಗಳನ್ನು ಆಯ್ಕೆ ಮಾಡಬೇಕು ಎಂದು ಪರಿಷ್ಕರಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವೇ? ಹಾಗೆ ಮಾಡಿ ದರೆ ಯಾರೆಲ್ಲಾ ಅರ್ಜಿ ಹಾಕಬಹುದು ಎಂದು ನೀವೇ ಯೋಚಿಸಿ. ಹೀಗಾಗಿ ಆ ಅಂಶವನ್ನು ಮಾತ್ರ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ’ ಎಂದರು.
ಮಠದ ಚಟುವಟಿಕೆಗಳನ್ನು ತೆರಿಗೆ ವಿನಾಯಿತಿ ವ್ಯಾಪ್ತಿಗೆ ತರುವ ಉದ್ದೇಶದಿಂದ 1990ರಲ್ಲಿ ಡೀಡ್ ಮಾಡಲಾಯಿತು. ಅದನ್ನು ಆಡಳಿತ ಮಂಡಳಿ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಆದರೂ ಅದನ್ನು ಪ್ರಶ್ನಿಸುತ್ತಿರುವುದು ಏಕೆ? ಏನೇ ಅಸಮಾಧಾನವಿದ್ದರೂ ಸದ್ಧರ್ಮ ವೀರಶೈವ ಸಂಘಕ್ಕೆ ದೂರು ಕೊಡಲಿ. ಅದನ್ನು ಬಿಟ್ಟು ಖಾಸಗಿ ರೆಸಾರ್ಟ್‌ನಲ್ಲಿ ಮಾತನಾಡುವುದಲ್ಲ ಎಂದರು